
ಜಮೀನಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆಹಾನಿ
ರಾಯಚೂರು,ಜು.28: ನಾರಾಯಣಪುರ ಬಲದಂಡೆ ಕಾಲುವೆ ನೀರು ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆಹಾನಿಯಾಗಿರುವ ಘಟನೆ ದೇವದುರ್ಗ ತಾಲೂಕಿನ ಇಂಗಳದಾಳದಲ್ಲಿ ನಡೆದಿದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಹತ್ತಿ ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.ಅಲ್ಲದೆ, ಕಾಲುವೆಯಲ್ಲಿ ಹೂಳು ತುಂಬಿಕೊಂಡು ಗಿಡಗಂಟೆ ಬೆಳೆದ ಹಿನ್ನೆಲೆಯಲ್ಲಿ ಜಮೀನುಗಳಿಗೆ ನೀರು ನುಗ್ಗಿದ್ದು, ನೀರು ಹರಿಸುವ ಮುನ್ನ ಜಂಗಲ್ ಕಟ್ ಮಾಡದ ಹಿನ್ನೆಲೆ ಅನಾಹುತ ನಡೆದಿದೆ.
ಬೆಳೆ ನೀರುಪಾಲಾಗಿರುವ ಹಿನ್ನೆಲೆಯಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತರು ಆಕ್ರೋಶ ಹೊರಹಾಕಿದ್ದು, ಇಂಗಳದಾಳ, ಬೂದಿನಾಳ ಜಮೀನುಗಳಿಗೆ ನೀರು ನುಗ್ಗಿದೆ. ಬೇರೆ ದಾರಿಯಿಲ್ಲದೇ ಜೆಸಿಬಿಯಿಂದ ಸ್ವತಃ ರೈತರೇ ಕಾಲುವೆ ಸ್ವಚ್ಛ ಮಾಡಿಕೊಂಡಿದ್ದಾರೆ.
