
ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗ್ರಾಹಕನ ತಲೆ ಒಡೆದ ಸಿಬ್ಬಂದಿ: ಬೆಳಗಾವಿಯಲ್ಲಿ ಭೀಕರ ಹಲ್ಲೆ..!
ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಬಾರ್ ಸಿಬ್ಬಂದಿ ಇಬ್ಬರು ಗ್ರಾಹಕರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಬೆಳಗಾವಿ ನಗರದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಶರಾವತಿ ಬಾರ್‌ನಲ್ಲಿ ಈ ಘಟನೆ ನಡೆದಿದೆ. ಸಾರಾಯಿ ಕುಡಿಯಲು ಬಂದಿದ್ದ ಯುವಕನೊಬ್ಬ ಬಾರ್ ಮಾಲೀಕನಿಗೆ ಬೈದಿದ್ದಕ್ಕೆ ಆಕ್ರೋಶಗೊಂಡ ಸಿಬ್ಬಂದಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ವೇಳೆ ಯುವಕನ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಮತ್ತೋರ್ವ ಗ್ರಾಹಕನ ಮೇಲೂ ಸಿಬ್ಬಂದಿ ಕೈ ಮಾಡಿದ್ದಾರೆ. ಬಾರ್‌ನಲ್ಲಿ ನಡೆದ ಈ ಅಟ್ಟಹಾಸದ ದೃಶ್ಯಾವಳಿಯನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಾರ್ ಸಿಬ್ಬಂದಿಯ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
