
ಗ್ಯಾರೇಜ್ ಅಗ್ನಿ ಅವಘಡ : ಕಾರು, ಆಟೋಗಳು ಸುಟ್ಟು ಕರಕಲು
ಬೆಂಗಳೂರು,ಜು.27: ಗ್ಯಾರೇಜ್‌ವೊಂದರಲ್ಲಿ ಭಾರೀ ಅಗ್ನಿಅವಘಡ ಸಂಭವಿಸಿ ಸುಮಾರು 20ಕ್ಕೂ ಹೆಚ್ಚು ಕಾರುಗಳು ಹಾಗೂ 8 ಆಟೋಗಳು ಸುಟ್ಟು ಕರಕಲಾಗಿರುವ ಘಟನೆ ಥಣಿಸಂದ್ರದಲ್ಲಿ ಬೆಳಗಿನ ಜಾವ ನಡೆದಿದೆ.
ಥಣಿಸಂದ್ರ ಮುಖ್ಯರಸ್ತೆಯ ಭಾರತಿ ಸಿಟಿ ಬಳಿಯ ಗ್ಯಾರೇಜ್‌ನಲ್ಲಿ ಈ ಅವಘಡ ಸಂಭವಿಸಿದ್ದು,ಘಟನೆಯಲ್ಲಿ ಸಣ್ಣಪುಟ್ಟ ರಿಪೇರಿಗೆ ತಂದಿದ್ದ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ. ಜೊತೆಗೆ ಜಾಗ್ವಾರ್, ರೇಂಜ್ ರೋವರ್ ಕಾರುಗಳಿಗೂ ಹಾನಿಯಾಗಿದೆ.
ಗ್ಯಾರೇಜ್‌ನಿಂದ ಪಕ್ಕದ ಶೆಡ್‌ಗೂ ಬೆಂಕಿ ತಗುಲಿದ್ದು, ಅಲ್ಲಿ ನಿಲ್ಲಿಸಿದ್ದ ಸುಮಾರು 8 ಆಟೋಗಳು ಅಗ್ನಿಗೆ ಆಹುತಿಯಾಗಿವೆ. ಅಲ್ಲದೇ ಕಾರು ಗ್ಯಾರೇಜ್ ಸಮೀಪದ ಯುಪಿವಿಸಿ ಕಿಟಕಿ ಫ್ಯಾಕ್ಟರಿಗೂ ಬೆಂಕಿ ತಗುಲಿದೆ. ಇದರಿಂದ ಫ್ಯಾಕ್ಟರಿಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಗ್ರಾಹಕರ ಕಿಟಕಿ ವಸ್ತುಗಳು, ಹಾಗೂ 4 ಲಕ್ಷ ರೂ. ಮೌಲ್ಯದ ಫ್ಯಾಕ್ಟರಿ ಯಂತ್ರಕ್ಕೆ ಹಾನಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.
