
ಚಿಕ್ಕನಾಯಕನಹಳ್ಳಿ ಪುರಸಭೆ ವಿರುದ್ಧ ರೊಚ್ಚಿಗೆದ್ದ ಜೋಗಿಹಳ್ಳಿ ಗ್ರಾಮಸ್ಥರು
ತುಮಕೂರು:ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ 2ನೇ ವಾರ್ಡ್ ಜೋಗಿಹಳ್ಳಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಲೇ ಇದೆ.
ನೀರಿನ ಸಮಸ್ಯೆ ಬಗೆಹರಿಸುವಂತೆ ಇಲ್ಲಿನ ನಿವಾಸಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ.ಪ್ರತಿಭಟನೆ ನಡೆದಾಗ ಮಾತ್ರ ಸಮಸ್ಯೆ ಬಗೆಹರಿಸುವುದಾಗಿ ಪುರಸಭೆ ಅಧಿಕಾರಿಗಳು ಭರವಸೆ ನೀಡುತ್ತಾರೆ.
ಆದರೆ, ಭರವಸೆ ನೀಡಿದ ಮೇಲೆ ಆಗಿದ್ದೇನು?ಹೊಸ ಮೋಟರ್ ಅಳವಡಿಸುವ ಬದಲು, ಹಳೆಯ ಮೋಟರ್ ಅಳವಡಿಸಿ ಕಾಟಾಚಾರಕ್ಕೆ ಕೆಲಸ ಮಾಡಿದಂತೆ ಮಾಡಲಾಗಿದೆ. ಪರಿಣಾಮ, ಮೋಟರ್ನಿಂದ ನೀರು ಬರುತ್ತಿದೆಯಾದರೂ, ಪ್ರಮಾಣ ಮಾತ್ರ ಅತ್ಯಂತ ಕಡಿಮೆ!
ಜನರ ಸಮಸ್ಯೆ ಬಗೆಹರಿಸಲು ಹಳೆಯ ಮೋಟರ್ ಸಾಕಾಗುವುದಿಲ್ಲ ಎನ್ನುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ?ಹೊಸ ಮೋಟರ್ ಅಳವಡಿಸುವಂತೆ ನಿವಾಸಿಗಳು ಹಲವು ಬಾರಿ ಅರ್ಜಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇದರಿಂದ ಆಕ್ರೋಶಗೊಂಡ ಜೋಗಿಹಳ್ಳಿ ನಿವಾಸಿಗಳು ಪುರಸಭೆ ಕಾರ್ಯಾಲಯಕ್ಕೆ ತೆರಳಿ, ಇಂಜಿನಿಯರ್ ಮಂಜುನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಜನರ ಸಮಸ್ಯೆಗೆ ಉತ್ತರ ಕೊಡಬೇಕಾದ ಅಧಿಕಾರಿಗಳೇ, “ಇನ್ನೂ ಎಷ್ಟು ದಿನ ಇದೇ ಸಮಸ್ಯೆ?” ಎಂದು ಜನರು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಂತರ ಸ್ಥಳಕ್ಕೆ ಆಗಮಿಸಿದ ಇಂಜಿನಿಯರ್ ಮಂಜುನಾಥ್ ಅವರು ಜೋಗಿಹಳ್ಳಿ ಪ್ರದೇಶದ ನೀರಿನ ಸಮಸ್ಯೆಯನ್ನು ಪರಿಶೀಲನೆ ನಡೆಸಿದರು.ಸಮಸ್ಯೆಯನ್ನು ಬಗೆಹರಿಸುವುದಾಗಿ ಇಂಜಿನಿಯರ್ ಭರವಸೆ ನೀಡಿದ್ದಾರೆ.
ಇದು ಮತ್ತೆ ಕೇವಲ ಭರವಸೆಯಾಗುತ್ತದೆಯಾ? ಅಥವಾ ನಿಜವಾಗಿಯೂ ಹೊಸ ಮೋಟರ್ ಅಳವಡಿಸಿ, ಜೋಗಿಹಳ್ಳಿ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೀರಾ?ಜನರಿಗೆ ಬೇಕಿರುವುದು ಭರವಸೆ ಅಲ್ಲ…ಸಾಕಷ್ಟು ಪ್ರಮಾಣದ ನೀರು ಮತ್ತು ಶಾಶ್ವತ ಪರಿಹಾರ! ಪುರಸಭೆ ಅಧಿಕಾರಿಗಳು ಈ ಬಾರಿ ಮಾತು ಉಳಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
