
ರಾಜ್ಯದ ಜನತೆಗೆ ಬಾಯಿ ಸುಡುವ ಸುದ್ದಿ : ನಂದಿನಿ ತುಪ್ಪ, ಬೆಣ್ಣೆ ದರ ಏರಿಕೆ
ಬೆಂಗಳೂರು, ಜು.23: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ರಾಜ್ಯದ ಗ್ರಾಹಕರಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತೊಂದು ಶಾಕ್ ನೀಡಿದೆ. ನಂದಿನಿ ತುಪ್ಪದ ದರವನ್ನು ಪ್ರತಿ ಕೆಜಿಗೆ 15 ರೂಪಾಯಿ ಹಾಗೂ ಬೆಣ್ಣೆಯ ದರವನ್ನು 22 ರೂಪಾಯಿ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಜುಲೈ 24ರಿಂದ ಜಾರಿಗೆ ಬರಲಿದ್ದು, ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಸೇರಿದಂತೆ ಕೆಎಂಎಫ್‌ನ ಎಲ್ಲಾ ಮಳಿಗೆಗಳಲ್ಲಿ ಅನ್ವಯವಾಗಲಿದೆ.
ಪ್ರಸ್ತುತ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 700 ರೂಪಾಯಿ ಇದ್ದು, ನಾಳೆಯಿಂದ 715 ರೂಪಾಯಿಗೆ ಏರಿಕೆಯಾಗಲಿದೆ. ಅದೇ ರೀತಿ ಬೆಣ್ಣೆಯ ದರದಲ್ಲೂ ಹೆಚ್ಚಳ ಮಾಡಲಾಗಿದ್ದು, ಹೊಸ ದರದಂತೆ ಮಾರಾಟ ನಡೆಯಲಿದೆ ಎಂದು ಕೆಎಂಎಫ್ ತಿಳಿಸಿದೆ.
ಈ ದರ ಏರಿಕೆಯಿಂದ ಗೃಹ ಬಳಕೆದಾರರ ಜೊತೆಗೆ ಹೋಟೆಲ್, ಬೇಕರಿ ಹಾಗೂ ಸಿಹಿತಿಂಡಿ ತಯಾರಿಕಾ ಉದ್ಯಮಕ್ಕೂ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ತುಪ್ಪ ಮತ್ತು ಬೆಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಉದ್ಯಮಿಗಳು ಉತ್ಪಾದನಾ ವೆಚ್ಚ ಹೆಚ್ಚಳದ ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯೂ ಪರೋಕ್ಷವಾಗಿ ಏರಿಕೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಈ ನಿರ್ಧಾರ ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಈ ದರ ಪರಿಷ್ಕರಣೆ ಮತ್ತಷ್ಟು ಹೊರೆ ತಂದಿದೆ.
