
ಬಸವರಾಜ್ ಕನ್ನಾಳೆ ಡೈರಿಯಲ್ಲಿ ಹಣದ ಲೆಕ್ಕ ಪತ್ತೆ
ಬೆಂಗಳೂರು.ಸೆ.29- ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ, ಆರೋಪಿ ಬಸವರಾಜ್ ಕನ್ನಾಳೆ ಮನೆಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ)ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಹಣದ ಲೆಕ್ಕ ಹೊಂದಿರುವ ಡೈರಿ ಪತ್ತೆಯಾಗಿದೆ.
ಅಭ್ಯರ್ಥಿಗಳಿಂದ ಪಡೆಯಬೇಕಿದ್ದ ಹಣ, ಪಾವತಿಯಾಗಿರುವ ಮೊತ್ತ ಹಾಗೂ ಬಾಕಿ ಉಳಿದಿರುವ ಹಣದ ವಿವರಗಳನ್ನು ಬಸವರಾಜ್ ಕನ್ನಾಳೆ ಡೈರಿಯಲ್ಲಿ ದಾಖಲಿಸಿಕೊಂಡಿದ್ದ ಎನ್ನಲಾಗಿದ್ದು, ಕೆಲವು ಅಭ್ಯರ್ಥಿಗಳ ಹೆಸರುಗಳ ಜತೆಗೆ ನಿರ್ದಿಷ್ಟ ಮೊತ್ತಗಳನ್ನೂ ನಮೂದಿಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಡೈರಿಯಲ್ಲಿನ ಒಂದು ಹಾಳೆಯಲ್ಲಿ ಎಂಟು ಅಭ್ಯರ್ಥಿಗಳಿಂದ ಬರಬೇಕಿದ್ದ ಬಾಕಿ ಹಣದ ವಿವರಗಳಿವೆ. ಅದರಲ್ಲಿ ಮಂಜುನಾಥ್ ಅವರಿಂದ 10 ಲಕ್ಷ, ಪೂಜಾ ಅವರಿಂದ 10 ಲಕ್ಷ, ಅಶ್ವಿನಿ ಕುಮಾರ್‌ರಿಂದ 10 ಲಕ್ಷ, ಮೋಹನ್ ಕುಮಾರ್‌ನಿಂದ 5 ಲಕ್ಷ, ಸಂಗಮೇಶ್ ಅವರಿಂದ 10 ಲಕ್ಷ, ಪದ್ಮಾವತಿ ಅವರಿಂದ 10 ಲಕ್ಷ ಹಾಗೂ ಹರೀಶ್ ಅವರಿಂದ 10 ಲಕ್ಷ ಬಾಕಿ ಬರಬೇಕಿದೆ ಎಂದು ನಮೂದಿಸಲಾಗಿದೆ.
ಇದರೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆಗಳು, ಹಣದ ಮೊತ್ತ ಹಾಗೂ ಜಲಸಂಪನ್ಮೂಲ ಇಲಾಖೆ ಎಂಬ ಉಲ್ಲೇಖವೂ ಡೈರಿಯಲ್ಲಿ ಕಂಡುಬAದಿದೆ ಎಂದು ತಿಳಿದುಬಂದಿದೆ.
20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿ :
ಸುಮಾರು 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಮೂರು ವಿಲ್ಲಾಗಳನ್ನು ಬುಕ್ ಮಾಡಲಾಗಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಲಭ್ಯವಾಗಿದೆ.ಅಭ್ಯರ್ಥಿಗಳಿಂದ ಸ್ವೀಕರಿಸಿದ ಹಣ ಹಾಗೂ ಬಾಕಿ ಉಳಿದ ಮೊತ್ತದ ಲೆಕ್ಕವನ್ನು ಆರೋಪಿ ದಾಖಲಿಸಿಕೊಂಡಿದ್ದಾನೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಪತ್ತೆಯಾಗಿರುವ ಡೈರಿ ಹಾಗೂ ಅದರಲ್ಲಿನ ಹಣಕಾಸಿನ ವಿವರಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ಹೆಸರುಗಳು ಮತ್ತು ಹಣದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.ಡೈರಿಯಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ಪಾತ್ರದ ಕುರಿತು ತನಿಖೆ ಪೂರ್ಣಗೊಂಡ ಬಳಿಕವೇ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.
