
ಕೋಡಿಹಳ್ಳಿ ಚಂದ್ರಶೇಖರ್ಗೆ 14 ದಿನಗಳ ನ್ಯಾಯಾಂಗ ಬಂಧನ
ಹುಬ್ಬಳ್ಳಿ.ಸೆ.29- 2013ರ ರೈಲು ತಡೆ (ರೈಲು ರೋಕೋ) ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹುಬ್ಬಳ್ಳಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
2013ರಲ್ಲಿ ರೈತರ ಪ್ರತಿಭಟನೆಯ ಅಂಗವಾಗಿ ಹುಬ್ಬಳ್ಳಿಯಲ್ಲಿ ಸುಮಾರು ಆರು ಗಂಟೆಗಳ ಕಾಲ ರೈಲು ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಚಂದ್ರಶೇಖರ್ ಅವರ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿಯಾಗಿತ್ತು.
ವಾರೆಂಟ್ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸ್ ಪಡೆ (ಆರ್ಪಿಎಫ್) ಪೊಲೀಸರು ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದು ಹುಬ್ಬಳ್ಳಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತು.
ಕೋರ್ಟ್ಗೆ ಹಾಜರುಪಡಿಸುವುದಕ್ಕೂ ಮುನ್ನ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸೋಮವಾರ ಬೆಳ್ಳಂಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಂಧಿಸಲಾಗಿತ್ತು.
ಬೆಳಗ್ಗೆ 10 ಗಂಟೆಗೆ ಶಿರಸಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಲು ಹಾಗೂ ತದ ನಂತರ 11.30ಕ್ಕೆ ದಾಸನಕೊಪ್ಪದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸಲು ರೈತ ಸಂಘ ಉದ್ದೇಶಿಸಿತ್ತು. ಅದಕ್ಕಾಗಿ ಕೋಡಿಹಳ್ಳಿ ಚಂದ್ರಶೇಖರ್ ಶಿರಸಿಗೆ ಆಗಮಿಸಿದ್ದರು.
ಆ ಸಂದರ್ಭದಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ 2013ರಲ್ಲಿ ಸುಮಾರು ಆರು ಗಂಟೆ ಎಲ್ಲಾ ರೈಲುಗಳನ್ನು ತಡೆದು ರೈತರು ಹೋರಾಟ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ವಾರೆಂಟ್ ಮೇಲೆ ಹುಬ್ಬಳ್ಳಿ ರೈಲ್ವೆ ಪೊಲೀಸರು ಶಿರಸಿ ಪೊಲೀಸರ ಸಹಕಾರ ಪಡೆದು ಕೋಡಿಹಳ್ಳಿ ಚಂದ್ರಶೇಖರ್ರನ್ನು ಬಂಧಿಸಲಾಯಿತು.
