
ಮೈಸೂರು ದಸರಾ ಉದ್ಘಾಟನೆ : ಗವಿಮಠದ ಶ್ರೀಗಳಿಗೆ ಆಹ್ವಾನ
ಕೊಪ್ಪಳ.ಸೆ.29- ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಗವಿಮಠದ ಶ್ರೀಗಳನ್ನು ಆಹ್ವಾನಿಸಲಾಗಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಇಂದು ಗವಿಮಠಕ್ಕೆ ಆಗಮಿಸಿ ಶ್ರೀಗಳಿಗೆ
ಅಧಿಕೃತ ಆಹ್ವಾನ ನೀಡಿದರು.
ಅಕ್ಟೋಬರ್ 11ರಿಂದ ಆರಂಭವಾಗಲಿರುವ ಮೈಸೂರು ದಸರಾ ಕಾರ್ಯಕ್ರಮದಲ್ಲಿ 11 ದಿನಗಳ ಕಾಲ ಭಾಗವಹಿಸುವಂತೆ ಸಚಿವರು ಮನವಿ ಮಾಡಿದರು. ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀಗಳ ಆಯ್ಕೆ ಈ ಭಾಗದ ಜನರಿಗೆ ಸಂತಸ :
ನಂತರ ಕೊಪ್ಪಳದಲ್ಲಿ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ವಿಶ್ವದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ.ಪ್ರತಿವರ್ಷ ಸಾಧಕರಿಂದ ದಸರಾ ಉದ್ಘಾಟನೆ ಮಾಡಿಸಲಾಗುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ತಾವು ನಾಲ್ಕನೇ ಬಾರಿ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು.
ಈ ಬಾರಿ ದಸರಾ ಉದ್ಘಾಟನೆಗೆ ಗವಿಶ್ರೀಗಳನ್ನು ಆಯ್ಕೆ ಮಾಡಿರುವುದು ಈ ಭಾಗದ ಜನರಿಗೆ ಸಂತಸ ತಂದಿದೆ. ಮುಖ್ಯಮಂತ್ರಿ ಜೊತೆ ಶ್ರೀಗಳು ಮಾತನಾಡಿ ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಶ್ರೀಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಅಪಪ್ರಚಾರಗಳು ನಡೆದಿವೆ ಎಂದು ಆರೋಪಿಸಿದ ಸಚಿವರು,ಗವಿಮಠದ ಶ್ರೀಗಳು ಸೂಕ್ಷ್ಮ ಮನಸ್ಸಿನವರಾಗಿದ್ದು, ಅವರಿಗೆ ನೋವಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.ಅಧಿಕೃತ ಸಾಕ್ಷ್ಯಾಧಾರಗಳಿಲ್ಲದೆ ಸುದ್ದಿ ಪ್ರಸಾರ ಮಾಡುವವರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಗವಿಶ್ರೀಗಳಿಂದ ದಸರಾ ಉದ್ಘಾಟನೆ ಮಾಡಿಸುವ ಅವಕಾಶ ದೊರೆತಿರುವುದು ಸರ್ಕಾರಕ್ಕೂ ಗೌರವದ ವಿಷಯವಾಗಿದೆ. ಶ್ರೀಗಳು ಅದ್ದೂರಿತನ ಮತ್ತು ಆಡಂಬರದಿAದ ದೂರವಿರುವ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಸಚಿವರು ಹೇಳಿದರು.
ಅಕ್ಟೋಬರ್ 10ರಂದು ಶ್ರೀಗಳು ಮೈಸೂರಿಗೆ ಆಗಮಿಸಲಿದ್ದು, ಅಕ್ಟೋಬರ್ 11ರಂದು ದಸರಾಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.
