LatestTop Storiesಬೆಂಗಳೂರು-Bengaluruರಾಜಕೀಯ | Politics

ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣ..!

ಬೀದರ್/ಭಾಲ್ಕಿ.ಅ.11- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯರ ನೇಮಕಾತಿಗೆ ಸಂಬAಧಿಸಿದ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿರುವ ಓಂ ಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ .

ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿ ವಿವಿಧ ಖಾತೆಗಳ ಮೂಲಕ ವರ್ಗಾವಣೆ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿದೆ.ಈ ಹಿಂದೆ ಕೂಡ ಇದೇ ಸೊಸೈಟಿಗೆ ಇಡಿ ತಂಡ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಅಭ್ಯರ್ಥಿಗಳಿಂದ ಹಣ ವರ್ಗಾವಣೆ ಆರೋಪ:

ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಸುಮಾರು 75 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ, ಬಸವರಾಜ್ ಕನ್ನಾಳೆ ಖಾತೆಗೆ ಜಮಾ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಈ ಹಣಕಾಸಿನ ವಹಿವಾಟಿನಲ್ಲಿ ಭಾಲ್ಕಿಯ ಓಂ ಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿಯ ಪಾತ್ರದ ಕುರಿತು ತನಿಖಾ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ.

ಇದಲ್ಲದೆ, ಐಎಎಸ್ ಅಧಿಕಾರಿ ಜ್ಞಾನೇಂದ್ರಗೆ ಇದೇ ಸಹಕಾರಿ ಸೊಸೈಟಿಯಿಂದ ಸುಮಾರು 49 ಲಕ್ಷ ರೂಪಾಯಿ ನೀಡಲಾಗಿತ್ತು.ಈ ಹಣದ ಮೂಲ, ವರ್ಗಾವಣೆಯ ಉದ್ದೇಶ ಹಾಗೂ ಪ್ರಕರಣದ ಇತರ ಆರೋಪಿಗಳೊಂದಿಗಿನ ಸಂಬಂಧದ ಕುರಿತು ತನಿಖೆಯಿಂದ ಹೆಚ್ಚಿನ ವಿವರಗಳು ಹೊರಬರಬೇಕಿದೆ.

ಇಡಿ ವಶದಲ್ಲಿರುವ ಬಸವರಾಜ್ ಕನ್ನಾಳೆ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಬೀದರ್‌ನ ಬಸವರಾಜ್ ಕನ್ನಾಳೆ ಈಗಾಗಲೇ ಇಡಿ ವಶದಲ್ಲಿದ್ದು, ಅಭ್ಯರ್ಥಿಗಳಿಂದ ಹಣ ಸಂಗ್ರಹಣೆ ಮತ್ತು ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

ಕನ್ನಾಳೆ ಖಾತೆಗೆ ಹಣ ಜಮೆಯಾಗಿರುವುದು ಮತ್ತು ಐಎಎಸ್ ಅಧಿಕಾರಿ ಜ್ಞಾನೇಂದ್ರಗೆ ಹಣ ಪಾವತಿಯಾಗಿರುವುದಾಗಿ ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ, ಸಹಕಾರಿ ಸೊಸೈಟಿಯ ಹಣಕಾಸಿನ ದಾಖಲೆಗಳು ಹಾಗೂ ಸಂಬಂಧಿತ ವಹಿವಾಟುಗಳ ಪರಿಶೀಲನೆ ತನಿಖೆಯ ಪ್ರಮುಖ ಭಾಗವಾಗಿರುವ ಸಾಧ್ಯತೆಯಿದೆ.

Share with Friends
author avatar
Digital Desk