
ಹಾಸನಾಂಬ ಜಾತ್ರೆಯ ಸಿಸಿಕ್ಯಾಮರಾ ಅಳವಡಿಕೆ ಟೆಂಡರ್ನಲ್ಲಿ ಗೋಲ್ಮಾಲ್ ಆರೋಪ!
ಹಾಸನ.ಅ.10- ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಲಿರುವ ಹಾಸನಾಂಬ ಜಾತ್ರಾ ಮಹೋತ್ಸವದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಸಿಸಿಕ್ಯಾಮರಾ ಅಳವಡಿಕೆ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಚರ್ಚೆ ನಡೆದಿದೆ.
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಸಿಸಿಕ್ಯಾಮರಾ ಅಳವಡಿಕೆ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಯಿತು. ಕಳೆದ ಬಾರಿ ಸಿಸಿಕ್ಯಾಮರಾ ಅಳವಡಿಕೆ ಹೆಸರಿನಲ್ಲಿ 80 ಲಕ್ಷ ರೂಪಾಯಿ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಣದ ಲೆಕ್ಕವನ್ನು ಇನ್ನೂ ನೀಡಿಲ್ಲ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಹಿಂದಿನ ಉಪವಿಭಾಗಾಧಿಕಾರಿ (ಎಸಿ) ಮಾರುತಿ ವಿರುದ್ಧವೂ ಸಾರ್ವಜನಿಕವಾಗಿ ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ನಡೆಯಬಹುದಾದ ಅಕ್ರಮಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಎಂ.ಶಿವಲಿಂಗೇಗೌಡ, ಕಳೆದ ಬಾರಿಯ ಸಿಸಿಕ್ಯಾಮರಾ ಅಳವಡಿಕೆ ವಿಚಾರದಲ್ಲಿ 80 ಲಕ್ಷ ರೂಪಾಯಿ ಲೂಟಿ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರಸ್ತಾಪಿಸಿ, ಹಣದ ಲೆಕ್ಕ ನೀಡದಿರುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
