
ಏರ್‌ಪೋರ್ಟ್ನಲ್ಲೇ ಹೈಟೆಕ್ ಭಿಕ್ಷಾಟನೆ..!
ದೇವನಹಳ್ಳಿ.ಅ.10- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸಂಪರ್ಕಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾದ ವ್ಯಕ್ತಿಯನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ವಿಮಾನ ನಿಲ್ದಾಣದ ಟರ್ಮಿನಲ್-1ರ ಬಫೆಲೋ ವಿಂಗ್ಸ್ ಸಮೀಪ ಈ ಘಟನೆ ನಡೆದಿದೆ.ಅಮಿನ್ ಎಂಬ ವ್ಯಕ್ತಿ ಪ್ರಯಾಣಿಕರನ್ನು ಸಂಪರ್ಕಿಸಿ ಹೈಟೆಕ್ ಭಿಕ್ಷಾಟನೆ ನೆಪದಲ್ಲಿ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಹಲವು ಹಣಕಾಸಿನ ವಹಿವಾಟುಗಳ ವಿವರಗಳು ಪತ್ತೆಯಾಗಿವೆ.ಅಲ್ಲದೆ, ಪ್ರಯಾಣಿಕರಿಂದ ಹಣ ಸ್ವೀಕರಿಸಲು ಬಳಸಲಾಗಿದೆ ಎನ್ನಲಾದ ಹಲವು ಪೇಮೆಂಟ್ ಸ್ಕ್ಯಾನರ್‌ಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಅಮೀನ್ ಬೆಂಗಳೂರಿನಿಂದ ಮುಂಬೈಗೆ ವಿಮಾನ ಟಿಕೆಟ್ ಅನ್ನು ಸಹ ಬುಕ್ ಮಾಡಿಕೊಂಡಿದ್ದ. ನಿಗದಿತ ಸಮಯಕ್ಕಿಂತ ಬಹಳ ಮುಂಚೆಯೇ ವಿಮಾನ ನಿಲ್ದಾಣಕ್ಕೆ ಬಂದು ಭಿಕ್ಷಾಟನೆ ನೆಪದಲ್ಲಿ ಹಣ ವಸೂಲಿ ನಡೆಸುತ್ತಿದ್ದ. ವಿಮಾನ ನಿಲ್ದಾಣ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮುಂಬೈ ಸೇರಿದಂತೆ ಇತರೆ ಏರ್‌ಪೋರ್ಟ್ಗಳಲ್ಲೂ ಇದೇ ರೀತಿಯ ಭಿಕ್ಷಾಟನೆ ದಂಧೆ ಮೂಲಕ ಹಣ ವಸೂಲಿ ತೊಡಗಿರುವ ಗ್ಯಾಂಗ್ ಇದೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಆರೋಪಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯಿಂದ ಹಣಕಾಸಿನ ವಹಿವಾಟುಗಳು ನಡೆದಿರುವ ಉದ್ದೇಶ, ಪ್ರಯಾಣಿಕರಿಂದ ಹಣ ಪಡೆದಿರುವುದರ ಹಿಂದಿನ ಕಾರಣ ಹಾಗೂ ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
