
ಕೆಪಿಎಸ್ಸಿ ಹಗರಣ : ಶಿವಶಂಕರಪ್ಪ , ಗೀತಾಗೆ ಇಡಿ ಗ್ರಿಲ್
ಬೆಂಗಳೂರು.ಅ.11- ಕೆಪಿಎಸ್ಸಿ ಅಕ್ರಮ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳ ತನಿಖೆ ಮುಂದುವರಿದಿದ್ದು, ಇ.ಡಿ. ಕಸ್ಟಡಿಯಲ್ಲಿರುವ ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಇಬ್ಬರೂ ತಮ್ಮದೇ ಆದ ಹೇಳಿಕೆಗಳನ್ನು ನೀಡಿದ್ದು, ಪ್ರಕರಣದಲ್ಲಿ ತಮ್ಮ ಪಾತ್ರದ ಕುರಿತು ಆರೋಪಗಳನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಪಿಎಸ್ಸಿಯಲ್ಲಿ ಸದಸ್ಯೆಯಾಗಿದ್ದ ಗೀತಾ, ತಾವು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಪರೀಕ್ಷೆಗೂ ಮುನ್ನ ಹಾಗೂ ಫಲಿತಾಂಶ ಪ್ರಕಟವಾದ ಬಳಿಕ ನಡೆಯುತ್ತಿದ್ದ ಸಭೆಗಳಲ್ಲಿ ಭಾಗವಹಿಸಿ, ಸಹಿ ಹಾಕಿ ನೀಡುತ್ತಿದ್ದೆವು ಅಷ್ಟೇ ಎಂದು ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ.ಈ ಪ್ರಕ್ರಿಯೆ ಹೊರತುಪಡಿಸಿ ಬೇರೆ ವಿಚಾರಗಳಿದ್ದರೆ ಕೆಪಿಎಸ್ಸಿ ಅಧ್ಯಕ್ಷರು ಹಾಗೂ ಸಂಬAಧಪಟ್ಟ ಅಧಿಕಾರಿಗಳನ್ನು ವಿಚಾರಿಸುವಂತೆ ಗೀತಾ ಹೇಳಿದ್ದಾರೆ.
ಇನ್ನು ಶಿವಶಂಕರಪ್ಪ ಸಾಹುಕಾರ್ ಕೂಡ ತಾವು ಯಾವುದೇ ಹಣ ಪಡೆದಿಲ್ಲ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.ಕೆಲವು ಸಂಬAಧಿಕರಿಗೆ ಸಹಾಯ ಮಾಡಿದ್ದಾಗಿ ಒಪ್ಪಿಕೊಂಡಿರುವ ಅವರು, ಯಾವುದೇ ಹಣ ಸ್ವೀಕರಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಸಂಬAಧಿಕರಿಗೆ ಯಾವ ರೀತಿಯ ಸಹಾಯ ಮಾಡಲಾಗಿತ್ತು ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಿಲ್ಲ.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಇ.ಡಿ. ಅಧಿಕಾರಿಗಳು, ಇಬ್ಬರನ್ನೂ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯೇ, ಆರೋಪಿಗಳ ಪಾತ್ರವೇನು ಹಾಗೂ ಹಣಕಾಸಿನ ವ್ಯವಹಾರಗಳು ನಡೆದಿವೆಯೇ ಎಂಬ ಅಂಶಗಳ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
