
ಜಿಬಿಎ ಎಲೆಕ್ಷನ್ ಮುಂದೂಡುವ ದೊಡ್ಡ ಹುನ್ನಾರ
ಧಾರವಾಡ, ಜು.10 : ರಾಜ್ಯ ಸರ್ಕಾರದಲ್ಲಿ ಜಿಬಿಎ ಎಲೆಕ್ಷನ್ ಮುಂದೂಡುವ ದೊಡ್ಡ ಹುನ್ನಾರ ಅಡಗಿದೆ. ಸುಪ್ರೀಂ ಕೋರ್ಟ್ ಈಗಾಗಲೇ ಎರಡು ಬಾರಿ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದರೂ ಸಹ, ಸರ್ಕಾರ ಮತ್ತೆ ಮುಂದೂಡಿಕೆ ಕೋರಿ ಅರ್ಜಿ ಸಲ್ಲಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಎಸ್ಐಆರ್ ನೆಪ ಒಡ್ಡಿ ಚುನಾವಣೆ ಮುಂದೂಡಲು ನೋಡುತ್ತಿದ್ದಾರೆ. ಆಂತರಿಕವಾಗಿ ತಮಗೆ ಗೆಲ್ಲಲು ಸಾಧ್ಯವಿಲ್ಲ ಎಂಬ ಸತ್ಯ ಸರ್ಕಾರಕ್ಕೆ ಮನವರಿಕೆಯಾಗಿದೆ. ಹೀಗಾಗಿ ಬೆಂಗಳೂರಿನ ಜನ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಕಾಗದದ ಮೇಲೆ ಮಾತ್ರ ಹಣ ಎತ್ತಿಟ್ಟಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ.ಆದರೆ ವಾಸ್ತವದಲ್ಲಿ ಯಾವುದೇ ಹಣ ಬಿಡುಗಡೆಯಾಗುತ್ತಿಲ್ಲ. ಹಿಂದೆ ಮಾಡಿದ ಕೆಲಸಗಳಿಗೇ ಇನ್ನು ಬಿಲ್ ಪಾವತಿಯಾಗಿಲ್ಲ. ಹೀಗಾಗಿ ಯಾವೊಬ್ಬ ಕಾಂಟ್ರಾಕ್ಟರ್ ಕೂಡ ಮುಂದೆ ಬರುತ್ತಿಲ್ಲ. ಇನ್ನು ವರ್ಷಗಳಿಂದ ವಾಸವಿರುವ ಮನೆಗಳಿಗೆ ಹಣ ವಸೂಲಿ ಮಾಡಿ ಎ ಖಾತಾ, ಬಿ ಖಾತಾ ಮಾಡಿಕೊಡಲಾಗುತ್ತಿದೆ ಎಂದು ಸರ್ಕಾರದ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ನಮ್ಮ ಪಕ್ಷದ ಹಿರಿಯ ನಾಯಕರು ಈಗಾಗಲೇ ಜಿಲ್ಲಾವಾರು ಸಭೆಗಳನ್ನು ನಡೆಸುತ್ತಿದ್ದಾರೆ. ನಾನು ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜಂಟಿಯಾಗಿ ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷರು ಕೂಡ ಬರ ಅಧ್ಯಯನಕ್ಕೆ ತೆರಳುತ್ತಿದ್ದಾರೆ. ರಾಜ್ಯದಲ್ಲಿನ ಬರಗಾಲ ಮತ್ತು ಎಸ್ಐಆರ್ ಪರಿಸ್ಥಿತಿ ಕುರಿತು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
