
ಮಂಗಳವಾರ ಹಾಲಿನ ದರ ಏರಿಕೆ ಅಂತಿಮ ನಿರ್ಧಾರ
ಬೆಂಗಳೂರು.ಅ.3- ಮಂಗಳವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಯಲಿದ್ದು,ಅಂದೇ ದರ ಏರಿಕೆ ನಿರ್ಧಾರ ಹೊರಬೀಳುವುದು ಖಚಿತವಾಗಿದೆ.
ವಿಧಾನಸೌಧದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಪರಿಷ್ಕರಣೆ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ.
ಈಗಾಗಲೇ ಪ್ರತಿ ಲೀಟರ್ ಹಾಲಿನ ದರವನ್ನು 10ರಷ್ಟು ಹೆಚ್ಚಿಸುವಂತೆ ಹಾಲು ಒಕ್ಕೂಟಗಳಿಂದ ಬೇಡಿಕೆ ವ್ಯಕ್ತವಾಗಿದೆ.ಆದರೆ, ಸರ್ಕಾರವು ಗ್ರಾಹಕರಿಗೆ ಹೆಚ್ಚಿನ ಹೊರೆ ಆಗದಂತೆ 3ರಿಂದ 5ರಷ್ಟು ದರ ಏರಿಕೆ ಮಾಡುವ ಸಾಧ್ಯತೆ ಇದೆ.
ಸಭೆಯಲ್ಲಿ ಹಾಲಿನ ದರ ಎಷ್ಟು ಹೆಚ್ಚಿಸಬೇಕು ಎಂಬುದರ ಜೊತೆಗೆ, ವಿವಿಧ ಹಾಲು ಒಕ್ಕೂಟಗಳು ಮಾಡಿರುವ ಬೇಡಿಕೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಒಕ್ಕೂಟಗಳ ಬೇಡಿಕೆಗೆ ಅನುಗುಣವಾಗಿ ದರ ಹೆಚ್ಚಿಸಬೇಕೇ ಅಥವಾ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡುವ ರೀತಿಯಲ್ಲಿ ದರ ಪರಿಷ್ಕರಿಸಬೇಕೇ ಎಂಬುದರ ಕುರಿತು ಸರ್ಕಾರ ಚರ್ಚೆ ನಡೆಸಲಿದೆ.
ದರ ಏರಿಕೆ ಮಾಡಿದರೆ ಸರ್ಕಾರ ಎಷ್ಟು ಮೊತ್ತವನ್ನು ಭರಿಸಬೇಕು? ಸರ್ಕಾರ ಮತ್ತು ಗ್ರಾಹಕರು ಇಬ್ಬರೂ ಹೆಚ್ಚುವರಿ ವೆಚ್ಚವನ್ನು ಹಂಚಿಕೊಳ್ಳಬೇಕೇ? ದರ ಏರಿಕೆಯಿಂದ ಸರ್ಕಾರದ ಆರ್ಥಿಕ ಹೊರೆ ಎಷ್ಟಾಗಲಿದೆ? ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಯಲಿದೆ. ಇದರ ಜೊತೆಗೆ ಹಾಲಿನ ದರವನ್ನು ಮಾತ್ರ ಹೆಚ್ಚಿಸಬೇಕೇ ಅಥವಾ ಹಾಲಿನ ಉಪ ಉತ್ಪನ್ನಗಳ ದರವನ್ನೂ ಪರಿಷ್ಕರಿಸಬೇಕೇ ಎಂಬ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ಹೀಗಾಗಿ, ಹಾಲಿನ ದರ ಏರಿಕೆ ಕುರಿತು ಹಲವು ಆಯಾಮಗಳಲ್ಲಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದ್ದು, ಸಭೆಯ ಬಳಿಕ ಸರ್ಕಾರ ಅಂತಿಮ ದರವನ್ನು ಪ್ರಕಟಿಸುವ ನಿರೀಕ್ಷೆ ಇದೆ.
