LatestTop Storiesಬೆಂಗಳೂರು-Bengaluru

ಸಿಎಂ ಸಚಿವರ ಧರಣಿ : ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು

ಬೆಂಗಳೂರು.ಅ.1- ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸಂಪುಟದ ಸದಸ್ಯರು ನಡೆಸಿದ ಧರಣಿ ವಿರೋಧಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗೆ ಬಿಜೆಪಿ ನಾಯಕರು ದೂರು ಸಲ್ಲಿಸಿದ್ದಾರೆ.

ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ ಕಚೇರಿ ಮುಂದೆ ನಿನ್ನೆ ಧರಣಿ ನಡೆಸಿದ್ದಾರೆ.ಹಾಗಾಗಿ ಇದು ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿದ್ದು, ನ್ಯಾಯಾಲಯ ನಿಂದನೆ ಪ್ರಕರಣವಾಗಿದೆ. ಕೂಡಲೇ ಮುಖ್ಯಮಂತ್ರಿ ಸೇರಿ ಸಚಿವರುಗಳ ಮೇಲೆ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಸಚಿವರು ಚುನಾವಣಾ ಆಯೋಗದ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದು ಯಾರು? ಈ ಪ್ರತಿಭಟನೆಗೆ ಲಿಖಿತವಾಗಿ ಅನುಮತಿ ನೀಡಲಾಗಿತ್ತೇ? ನೀಡಿದ್ದರೆ, ಅದರ ಪ್ರತಿಯನ್ನು ಸಾರ್ವಜನಿಕಗೊಳಿಸಬೇಕು.ಸಾಮಾನ್ಯ ನಾಗರಿಕರು ಅಥವಾ ಪ್ರತಿಪಕ್ಷಗಳು ಇದೇ ರೀತಿ ಚುನಾವಣಾ ಕಚೇರಿ ಆವರಣದಲ್ಲಿ ಧರಣಿ ನಡೆಸಲು ಬಂದರೆ ಅವರಿಗೆ ಇದೇ ರೀತಿಯ ಅವಕಾಶ ಪೊಲೀಸ್ ಇಲಾಖೆ ನೀಡಲಾಗುತ್ತದೆಯೇ? ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಸಚಿವರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಕೈಗೊಂಡ ಕ್ರಮಗಳ ಸಂಪೂರ್ಣ ವರದಿಯನ್ನು ಬಹಿರಂಗಪಡಿಸಬೇಕು. ನಿನ್ನೆ ನಡೆದ ಘಟನೆಯ ಕುರಿತು ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ, ಪೊಲೀಸ್ ಬಂದೋಬಸ್ತ್ ವಿವರ, ಅನುಮತಿ ಪತ್ರ ಹಾಗೂ ಸಂಬಂಧಿತ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕು ಮೊದಲು ಕಾಂಗ್ರೆಸ್ ನಾಯಕರ ಧರಣಿ ವಿರೋಧಿಸಿ ಬಿಜೆಪಿ ನಾಯಕರು ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಇಂದು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಅಶ್ವತ್ಥ್ ನಾರಾಯಣ ಸೇರಿದಂತೆ ಬಿಜೆಪಿ ನಾಯಕರು ಕಚೇರಿ ಮುಂಭಾಗದ ಮೆಟ್ಟಿಲುಗಳ ಮೇಲೆ ಕುಳಿತು ಮೌನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ನಿಗದಿತ ಸ್ಥಳವಾಗಿ ಫ್ರೀಡಂ ಪಾರ್ಕ್ ಇದ್ದರೂ, ಕಾಂಗ್ರೆಸ್ ನಾಯಕರು ಬೇರೆ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನೆ ನಡೆಸಲು ನಿಗದಿತ ಸ್ಥಳದಿಂದ ಹೊರಗೆ ಹೋದ ನಮ್ಮ ನಾಯಕರನ್ನು ಬಂಧಿಸಲಾಗುತ್ತದೆ.

ಆದರೆ ಕಾಂಗ್ರೆಸ್ ನಾಯಕರಿಗೆ ಬೇರೆ ರೀತಿಯ ಅವಕಾಶ ನೀಡಲಾಗುತ್ತಿದೆ ಎಂದು ಪೊಲೀಸರ ಕ್ರಮದ ಕುರಿತು ಪ್ರಶ್ನಿಸಿದರು.ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಸಮಾನ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು. ಇದೇ ಕಾರಣಕ್ಕೆ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲುಗಳ ಮುಂದೆ ಮೌನ ಪ್ರತಿಭಟನೆ ಕೈಗೊಂಡಿದ್ದೇವೆ ಎಂದರು.

Share with Friends
author avatar
Digital Desk