BlogLatestTop Storiesರಾಷ್ಟ್ರೀಯ-National

ದೆಹಲಿಗೆ ಮುತ್ತಿಗೆ ಹಾಕಲು ಮುಂದಾದ ರೈತರ ಗುಂಪು, ಗಡಿ ಭಾಗದಲ್ಲಿ ಭಾರಿ ಭದ್ರತಾ ಸಿಬ್ಬಂದಿ ನಿಯೋಜನೆ

ನವದೆಹಲಿ : ಪಂಜಾಬ್ ಮತ್ತು ಹರಿಯಾಣದ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪು ಇಂದು ಮಧ್ಯಾಹ್ನ 12 ಗಂಟೆಗೆ ದೆಹಲಿಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಖಾತರಿ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ರೈತರು ಪಾದಯಾತ್ರೆ ಹಮ್ಮಿಕೊಂಡಿದ್ದು, ಇಂದು ಮದ್ಯಾಹ್ನ 12 ಗಂಟೆಗೆ 101 ರೈತರನ್ನು ಒಳಗೊಂಡ ಗುಂಪು ಜಾಥಾ ನಡೆಸಲಿದ್ದಾರೆ.

ಈ ಬಗ್ಗೆ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಅವರು ತಿಳಿಸಿದ್ದು, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ರೈತರ ಪಾದಯಾತ್ರೆ ಹಿನ್ನೆಲೆಯಲ್ಲಿ ಹರಿಯಾಣ ಗಡಿ ಭಾಗದಲ್ಲಿ ಭಾರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ. ಜಲಫಿರಂಗಿಗಳನ್ನು ಏರ್ಪಡಿಸಲಾಗಿದೆ. ಭದ್ರತೆಗಾಗಿ ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಕಳೆದ ಶುಕ್ರವಾರ ಕೂಡ ರೈತರು ದೆಹಲಿಗೆ ಪಾದಯಾತ್ರೆ ಮಾಡಿದ್ದರು, ಜೊತೆಗೆ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದ್ದರು.

ಇದೀಗ ಇಂದು ಕೂಡ ಜಾಥಾ ನಡೆಯಲಿದ್ದು, ಯಾವುದೇ ಆಹಿತರಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮದ್ಯಾಹ್ನ 12 ಗಂಟೆಗೆ ರೈತರು ಜಾಥಾ ನಡೆಸಲಿದ್ದಾರೆ.

ಎಂಎಸ್‌ಪಿ, ಕೃಷಿ ಸಾಲ ಮನ್ನಾ, ರೈತರಿಗೆ ಪಿಂಚಣಿ, ಪೊಲೀಸ್ ಪ್ರಕರಣಗಳ ರದ್ದು, ವಿದ್ಯುತ್ ದರ ಏರಿಕೆ ಮಾಡಬಾರದು, 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ.

Share with Friends
author avatar
News Desk