
ಬಸ್ ತಡೆದು ಜಮಖಂಡಿಯಲ್ಲಿ ಗ್ರಾಮಸ್ಥರ ದಿಢೀರ್ ಪ್ರತಿಭಟನೆ..!
ಬಾಗಲಕೋಟೆ: ಜನಪ್ರತಿನಿಧಿಗಳು ಕೇವಲ ವೋಟಿಗಾಗಿ ಬರುತ್ತಾರೆ ಹೊರತು ಜನರ ನಿಜವಾದ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂದು ಆರೋಪಿಸಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಇನಾಂ ಹಂಚಿನಾಳ ಮತ್ತು ಗಲಗಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಇನಾಂ ಹಂಚಿನಾಳ ಹಾಗೂ ಗಲಗಲಿ ಭಾಗಕ್ಕೆ ಸಮಯಕ್ಕೆ ಸರಿಯಾಗಿ KSRTC ಬಸ್ಗಳ ವ್ಯವಸ್ಥೆ ಇಲ್ಲದಿರುವುದು.
ಸರಿಯಾದ ಸಮಯಕ್ಕೆ ಬಸ್ಗಳು ಬರದ ಕಾರಣ ಶಾಲಾ-ಕಾಲೇಜು ಮಕ್ಕಳಿಗೆ ಮತ್ತು ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲ ಉಂಟಾಗಿದೆ.

ಈ ಹಿಂದೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಇನಾಂ ಹಂಚಿನಾಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಭಯ ಮಾರ್ಗಗಳ ಸಂಚಾರ ತಡೆದು ನಿಂತ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು. ಇದರಿಂದಾಗಿ ರಸ್ತೆಯಿಡೀ ವಾಹನಗಳು ಸಾಲುಗಟ್ಟಿ ನಿಂತು, ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಯಿತು.
ಸ್ಥಳಕ್ಕೆ ಧಾವಿಸಿದ ಪೊಲೀಸ್ ಇಲಾಖೆಯು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿತು. ತದನಂತರ ಮಾಹಿತಿ ತಿಳಿದು ಜಮಖಂಡಿ ತಾಲೂಕಿನ KSRTC ಡಿಪೋ ಮ್ಯಾನೇಜರ್ ಹಾಗೂ ಇನಾಂ ಹಂಚಿನಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO) ಸ್ಥಳಕ್ಕೆ ಭೇಟಿ ನೀಡಿ, ಶೀಘ್ರವೇ ಸೂಕ್ತ ಬಸ್ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳ ಭರವಸೆಯ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದು, ಮುಖ್ಯ ರಸ್ತೆಯ ಸಂಚಾರ ಸುಗಮಗೊಳಿಸಲಾಯಿತು.
