
ಕೋಲಾರದ ಯಲ್ದೂರು PHC ಅವ್ಯವಸ್ಥೆಗೆ ರೋಗಿಗಳ ಪರದಾಟ..!
ಕೋಲಾರ/ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಹೋಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (PHC) ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೆ ಬಡ ರೋಗಿಗಳು, ಗರ್ಭಿಣಿಯರು ಹಾಗೂ ಮಹಿಳೆಯರು ತೀವ್ರ ಪರದಾಟ ನಡೆಸುವಂತಾಗಿದೆ.ತುರ್ತು ಸಮಯದಲ್ಲಿ ಆಂಬುಲೆನ್ಸ್ ಸಿಗದೆ, ಹೆರಿಗೆ ನೋವಿನಿಂದ ಬರುವ ಗರ್ಭಿಣಿಯರನ್ನು ಖಾಸಗಿ ವಾಹನಗಳಲ್ಲಿ ಕರೆದೊಯ್ಯುವ ದುಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ಸಾರಿಗೆ ಇಲ್ಲದೆ ಮಾರ್ಗ ಮಧ್ಯೆ ರಸ್ತೆಯಲ್ಲೇ ಹೆರಿಗೆಯಾದ ಉದಾಹರಣೆಗಳೂ ಇವೆ.

ಆರೋಗ್ಯ ಕೇಂದ್ರಕ್ಕೆ ಹೋಗಲು ಉತ್ತಮ ರಸ್ತೆ ಇಲ್ಲದ ಕಾರಣ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಬರುವುದಕ್ಕೂ ಅಡಚಣೆಯಾಗಿದೆ.ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಪ್ರಮುಖ ಹುದ್ದೆಗಳು ಖಾಲಿ ಇವೆ. ರಾತ್ರಿ 8 ಗಂಟೆಯ ನಂತರ PHC ಬಂದ್ ಆಗುವುದರಿಂದ, ತುರ್ತು ಚಿಕಿತ್ಸೆಗೆ 30 ಕಿ.ಮೀ ದೂರದ ಮುಳಬಾಗಿಲು ಅಥವಾ ಕೋಲಾರಕ್ಕೆ ಅಲೆಯಬೇಕಾದ ಅನಿವಾರ್ಯತೆ ಇದೆ.ಸೂಕ್ತ ಔಷಧಿ, ಬೆಡ್ ಮತ್ತು ಲ್ಯಾಬ್ ತಪಾಸಣೆ ಸೌಲಭ್ಯವಿಲ್ಲದೆ ಬಡ ರೋಗಿಗಳು ಅನಿವಾರ್ಯವಾಗಿ 2,000 ರಿಂದ 3,000 ರೂ. ವ್ಯಯಿಸಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
ಆಂಬುಲೆನ್ಸ್ ಹಾಗೂ ಅಗತ್ಯ ಸಿಬ್ಬಂದಿ ಸರಿಯಾಗಿ ಸೇವೆ ನೀಡದಿದ್ದರೂ ಹುದ್ದೆಯ ಹೆಸರಿನಲ್ಲಿ ವೇತನ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಅಪಘಾತ ವಲಯಗಳು ಹೆಚ್ಚಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಸಾವು-ನೋವುಗಳ ಸಂಖ್ಯೆ ಏರಿಕೆಯಾಗುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ (DHO) ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ (THO) ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ತಕ್ಷಣವೇ ಯಲ್ದೂರು PHC ಗೆ ಮೂಲಭೂತ ಸೌಕರ್ಯ ಕಲ್ಪಿಸಿ, ರಸ್ತೆ ದುರಸ್ತಿ ಮಾಡಿ, ಖಾಲಿ ಇರುವ ಸಿಬ್ಬಂದಿ ನೇಮಕ ಮಾಡುವ ಮೂಲಕ ಬಡವರ ಜೀವ ಕಾಪಾಡಬೇಕೆಂದು ಗ್ರಾಮಸ್ಥರು ತೀವ್ರವಾಗಿ ಒತ್ತಾಯಿಸಿದ್ದಾರೆ.
