BlogLatestTop Storiesಬೆಳಗಾವಿ-Belagaviರಾಜ್ಯ-Karnataka

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಬೆನ್ನಲ್ಲೇ ಬಾಲ ಬಿಚ್ಚಿದ ಎಂಇಎಸ್ ಪುಂಡರು, ನಿಷೇಧಾಜ್ಞೆ ಜಾರಿ

ಬೆಳಗಾವಿ : ನಾಳೆಯಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಈ ನಡುವೆ ನಾಡದ್ರೋಹಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ಪುಂಡರು ಬಾಲ ಬಿಚ್ಚಿದ್ದು ಈ ಹಿನ್ನೆಲೆಯಲ್ಲಿ ಅಲರ್ಟ್‌ ಆಗಿರುವ ಪೊಲೀಸರು ಈ ಭಾಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಒಂದು ದಿನ ಮುಂಚೆಯೇ ಬೆಳಗಾವಿಯಲ್ಲಿ ಮಹಾಮೇಳಾವ್ ನಡೆಸಲು ಎಂಇಎಸ್ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಗೊಂದಲಗಳು ಸೃಷ್ಟಿಯಾಗುವುದನ್ನು ತಡೆಯುವ ಉದ್ದೇಶದಿಂದ ಹಾಗೂ ಮಹಾಮೇಳಾವಕ್ಕೆ ಬ್ರೇಕ್ ಹಾಕಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಈ ಸಂಬಂಧ ಬೆಳಗಾವಿ ನಗರ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಅವರು ಈ ಭಾಗದಲ್ಲಿ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಇಲ್ಲಿ ಡಿಸೆಂಬರ್ 9 ರಿಂದ 20 ವರೆಗೆ ಅಂದರೆ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದೆ. ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಕಾರಣಕ್ಕೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ನಾಳೆ (ಸೋಮಚಾರ) ಬೆಳಗ್ಗೆ 6 ಗಂಟೆಯಿಂದ 20ನೇ ತಾರೀಕಿನ ಮಧ್ಯರಾತ್ರಿ 12 ಗಂಟೆ ವರೆಗೂ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಎನ್‌ಎಸ್‌ಎಸ್ ಕಾಯ್ದೆಯ ಕಲಂ 163 ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಅಲ್ಲದೇ ಬೆಳಗಾವಿಯ ಟಿಳಕವಾಡಿ, ಕ್ಯಾಂಪ್, ಶಹಾಪೂರ, ಮಾರ್ಕೆಟ್ ಠಾಣೆ ವ್ಯಾಪ್ತಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಇನ್ನು ವ್ಯಾಕ್ಸಿನ್ ಡಿಪೋ ಲೇಲೆ ಮೈದಾನ, ಧರ್ಮವೀರ ಸಂಭಾಜಿ ವೃತ್ತ, ಸಂಭಾಜಿ ಉದ್ಯಾನ ಹಾಗೂ ಶಿವಾಜಿ ಉದ್ಯಾನ ಭಾಗದಲ್ಲಿ ಮಹಾಮೇಳಾವ್ ನಡೆಸದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Share with Friends
author avatar
News Desk