
ಖೋಟಾ ನೋಟು ಜಾಲ,ಓರ್ವನ ಸೆರೆ
ನೆಲಮಂಗಲ,(ಬೆಂ.ಗ್ರಾಮಾಂತರ)ಜು.7 : ಖೋಟಾ ನೋಟು ಮುದ್ರಿಸಿ ರಾಜ್ಯದೆಲ್ಲೆಡೆ ಚಲಾವಣೆ ಮಾಡುತ್ತಿದ್ದ ಖದೀಮನೊಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ತುಮಕೂರಿನ ಹುಳಿಯಾರು ಹಾಗೂ ಮಾದನಾಯಕನಹಳ್ಳಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಖದೀಮ ರುದ್ರೇಶ್ ನನ್ನು ಬಂಧಿಸಲಾಗಿದೆ.

ಇನ್ನು ಬಂಧಿತ ರುದ್ರೇಶ್ (41)ತುಮಕೂರಿನ ಹುಳಿಯಾರಿನಲ್ಲಿ ಖೋಟಾ ನೋಟು ಚಲಾವಣೆ ಮಾಡಿದ್ದ. ಹುಳಿಯಾರಿನ ಚಿಲ್ಲರೆ ಅಂಗಡಿಯಲ್ಲಿ 500ರ ನಕಲಿ ನೋಟು ಬಳಸಿ ಸಿಗರೇಟ್ ಖರೀದಿ ಮಾಡಿದ್ದ.ಆದರೆ 500 ರೂ.ನೋಟಿನ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ಎ.ಶೆಟ್ಟಿ ಹುಳಿಯಾರು ಪೊಲೀಸರಿಗೆ ದೂರು ನೀಡಿದ್ದರು.

ಇನ್ನು ದೂರು ದಾಖಲಿಸಿಕೊಂಡ ಹುಳಿಯಾರು ಪೊಲೀಸರು ಮಾದನಾಯಕನಹಳ್ಳಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ನೆಲಮಂಗಲ ಬಳಿಯ ಗಂಗೊಂಡನಹಳ್ಳಿಯಲ್ಲಿ ಆರೋಪಿ ರುದ್ರೇಶ ನನ್ನು ಬಂಧಿಸಿದ್ದಾರೆ.
ಇದೇ ವೇಳೆ ಪ್ರಕರಣದ ಮತ್ತೊಬ್ಬ ಆರೋಪಿಗೆ ಬಲೆ ಬೀಸಿರುವ ಹುಳಿಯಾರು ಪೊಲೀಸರು ರುದ್ರೇಶ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
