Latestಬೆಂಗಳೂರು-Bengaluruರಾಜ್ಯ-Karnataka

ಪಂಚತಾರ ಹೋಟೆಲ್‌ಗಳಲ್ಲಿ ಅವಧಿ ಮೀರಿದ ಮಾಂಸ ಪತ್ತೆ..!

ಬೆಂಗಳೂರು: ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ನಗರದ ವಿವಿಧ ಸ್ಟಾರ್‌ ಹೋಟೆಲ್‌ಗಳ ಮೇಲೆ ಭರ್ಜರಿ ದಾಳಿ ನಡೆಸಿದ್ದಾರೆ. ನಗರದ 60ಕ್ಕೂ ಹೆಚ್ಚು 3 ಸ್ಟಾರ್, 5 ಸ್ಟಾರ್ ಹಾಗೂ 7 ಸ್ಟಾರ್ ಹೋಟೆಲ್‌ಗಳಲ್ಲಿ ಮೂರು ದಿನಗಳ ಕಾಲ ತಪಾಸಣೆ ನಡೆಸಲಾಗಿದೆ.

ಒಟ್ಟು 30 ತಂಡಗಳನ್ನು ರಚಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ನೂರಾರು ಕೆಜಿ ಮಾಂಸ ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಈಗಾಗಲೇ 77 ಆಹಾರ ಮಾದರಿಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ.

ಬ್ರೆಡ್, ಅಡುಗೆ ಎಣ್ಣೆ, ಮಾಂಸ, ಮೆಯೋನಿಸ್, ಮೊಸರು, ಹಾಲು, ತರಕಾರಿ, ಕೊತ್ತಂಬರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ತಪಾಸಣೆ ವೇಳೆ ಪತ್ತೆಯಾದ ಅವಧಿ ಮೀರಿದ ಆಹಾರ

640 ಕೆಜಿ ಅವಧಿ ಮೀರಿದ ಮಾಂಸ ಪತ್ತೆ
276 ಕೆಜಿ ಸೇವನೆಗೆ ಯೋಗ್ಯವಲ್ಲದ ತರಕಾರಿ ಪತ್ತೆ
45 ಲೀಟರ್ ಅವಧಿ ಮೀರಿದ ಹಾಲು ಮತ್ತು ಮೊಸರು ಪತ್ತೆ
12 ಕೆಜಿ ಅವಧಿ ಮೀರಿದ ಬೇಕರಿ ಉತ್ಪನ್ನಗಳು ವಶ
49 ಲೀಟರ್ ಮರುಬಳಕೆ ಮಾಡುತ್ತಿದ್ದ ಅಡುಗೆ ಎಣ್ಣೆ ಪತ್ತೆ
67 ಕೆಜಿ ಮಸಾಲೆ ಹಾಗೂ ಅವಧಿ ಮೀರಿದ ಇತರೆ ಆಹಾರ ಪದಾರ್ಥಗಳು ಪತ್ತೆ

ಪತ್ತೆಯಾದ ಆಹಾರ ಪದಾರ್ಥಗಳನ್ನು ಈಗಾಗಲೇ ಅಧಿಕಾರಿಗಳು ವಶಕ್ಕೆ ಪಡೆದು ನಾಶಪಡಿಸಿದ್ದಾರೆ.

ಹೋಟೆಲ್‌ಗಳಲ್ಲಿ ಹಲವು ನಿಯಮ ಉಲ್ಲಂಘನೆ

ಆಹಾರ ಸುರಕ್ಷತಾ ಇಲಾಖೆಯ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸದಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಕೆಲ ಹೋಟೆಲ್‌ಗಳಲ್ಲಿ ಆಹಾರಕ್ಕೆ ನಿಯಮಬಾಹಿರವಾಗಿ ಫುಡ್ ಕಲರ್ ಬಳಕೆ ಮಾಡಿರುವುದು ಪತ್ತೆಯಾಗಿದೆ.

ಅಲ್ಲದೆ ಆಹಾರ ಸಂಗ್ರಹಣೆ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು, ಮಾಂಸಾಹಾರ ಮತ್ತು ಸಸ್ಯಾಹಾರ ಪದಾರ್ಥಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿರುವುದು, FSSAI ನಿಯಮಗಳಿಗೆ ಅನುಗುಣವಾಗಿರದ ಆಹಾರ ಲೇಬಲಿಂಗ್ ಸೇರಿದಂತೆ ಹಲವು ಲೋಪಗಳು ಕಂಡುಬಂದಿವೆ.

ಇದರ ಜೊತೆಗೆ ಅವಧಿ ಮೀರಿದ ಮಾಂಸ, ಮಸಾಲೆ ಪದಾರ್ಥಗಳು ಹಾಗೂ ಡೈರಿ ಉತ್ಪನ್ನಗಳನ್ನು ಸಂಗ್ರಹಿಸಿರುವುದು ಕೂಡ ಪತ್ತೆಯಾಗಿದೆ.

ಕೆಲ ಹೋಟೆಲ್‌ಗಳಿಗೆ ಸ್ಥಳದಲ್ಲೇ ನೋಟಿಸ್

ನಿಯಮ ಉಲ್ಲಂಘನೆ ಕಂಡುಬಂದ ಕೆಲ ಹೋಟೆಲ್‌ಗಳಿಗೆ ಸ್ಥಳದಲ್ಲೇ ನೋಟಿಸ್ ನೀಡಲಾಗಿದೆ. ಗಂಭೀರ ಸ್ವರೂಪದ ಉಲ್ಲಂಘನೆ ಕಂಡುಬಂದಿರುವ ಇತರೆ ಹೋಟೆಲ್‌ಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ.

ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಹೋಟೆಲ್‌ಗಳ ವಿರುದ್ಧ ಮುಂದಿನ ದಿನಗಳಲ್ಲೂ ತಪಾಸಣೆ ಮತ್ತು ಕಾನೂನು ಕ್ರಮ ಮುಂದುವರಿಯಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Share with Friends
author avatar
News Desk