Crime NewsLatestTop Storiesಬೆಂಗಳೂರು-Bengaluru

14ನೇ ಆರೋಪಿ ಪ್ರದೂಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಕುರಿತು ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. 14ನೇ ಆರೋಪಿ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಸಂಬಂಧ 59ನೇ ಸಿಸಿಎಚ್ ನ್ಯಾಯಾಲಯ ಇಂದು ಆದೇಶವನ್ನು ಕಾಯ್ದಿರಿಸಿದೆ.
ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್ ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈತನೊಂದಿಗೆ 8ನೇ ಆರೋಪಿ ರವಿಶಂಕರ್ ಹಾಗೂ 10ನೇ ಆರೋಪಿ ವಿನಯ್ ಸಹ ಇದೇ ರೀತಿಯ ಅರ್ಜಿ ಸಲ್ಲಿಸಿದ್ದರು.

ಪ್ರಾಸಿಕ್ಯೂಷನ್ ಕೂಡ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಲು ಒಪ್ಪಿಗೆ ಸೂಚಿಸಿತ್ತು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಿಸಿ ತಮ್ಮ ವಾದ ಆಲಿಸಬೇಕೆಂದು ಕೋರಿದ್ದರು.ಆದರೆ ವಾದ-ಪ್ರತಿವಾದ ಆಲಿಸಿ ವಿಚಾರಣೆ ನಡೆಸಿದ ನ್ಯಾಯಾಲಯವು, ಮಾಫಿ ಸಾಕ್ಷಿ ಕುರಿತಂತೆ ಇತರೆ ಆರೋಪಿಗಳ ವಾದ ಆಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಸಹ-ಆರೋಪಿಗಳು ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಜೊತೆಗೆ ಪ್ರದೂಷ್ ಅವರನ್ನು ಮಾಫಿ ಸಾಕ್ಷಿ ಪರಿಗಣಿಸುವ ಸಂಬಂಧ ಇಂದು ಆದೇಶವನ್ನು ಕಾಯ್ದಿರಿಸಿದೆ. ಕೊಲೆ ಪ್ರಕರಣದಲ್ಲಿ ತಮಗೆ ಗೊತ್ತಿರುವ ಸತ್ಯವನ್ನು ನ್ಯಾಯಾಲಯದ ಮುಂದೆ ಪ್ರದೂಷ್ ಹೇಳಿಕೆ ನೀಡಬೇಕಿದ್ದು, ಹೇಳಿಕೆ ನೀಡಿದ ಬಳಿಕ ಇತರ ಆರೋಪಿಗಳ ವಕೀಲರು ಅಡ್ಡ ಪ್ರಶ್ನೆ ಮೂಲಕ ಸವಾಲು ಹಾಕಲಿದ್ದಾರೆ.ಮಾಫಿ ಸಾಕ್ಷಿಯ ಹೇಳಿಕೆಯನ್ನು ನ್ಯಾಯಾಲಯವು ಸಾಕ್ಷ್ಯವಾಗಿ ಪರಿಗಣಿಸುವುದರಿಂದ, ಈ ಪ್ರಕರಣದಲ್ಲಿ ಇದು ಪ್ರಮುಖ ತಿರುವು ಆಗುವ ಸಾಧ್ಯತೆ ಇದೆ. ಪ್ರದೂಷ್ ನ್ಯಾಯಾಲಯಕ್ಕೆ ನೀಡುವ ಮಾಹಿತಿಯ ಆಧಾರದ ಮೇಲೆ ಪ್ರಕರಣದ ಮುಂದಿನ ವಿಚಾರಣೆ ನಿರ್ಧಾರವಾಗಲಿದೆ.

Share with Friends
author avatar
Digital Desk