
ಆರ್ ಎಸ್ ಎಸ್ ನಿಷೇಧ: ಕಾಯ್ದೆ ಓದಲು ವಿಪಕ್ಷಗಳಿಗೆ ಖರ್ಗೆ ಸಲಹೆ
ಬೆಂಗಳೂರು,ಆ.14: ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ-2026 ಕಾಯ್ದೆಯನ್ನು ವಿರೋಧ ಪಕ್ಷಗಳು ಮೊದಲು ಸಂಪೂರ್ಣವಾಗಿ ಓದಿ, ಬಳಿಕ ಚರ್ಚೆ ನಡೆಸಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ ಕಾಯ್ದೆ ಇನ್ನೂ ಚರ್ಚೆಗೆ ಬಂದಿಲ್ಲ. ಕಾಯ್ದೆನಲ್ಲಿ ಏನಾದರೂ ತಪ್ಪಿದ್ದರೆ ಚರ್ಚೆಯ ವೇಳೆ ನೋಡೋಣ. ಆದರೆ ಕಾಯ್ದೆ ಓದದೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದರು.
ಈ ಬಿಲ್‌ನಲ್ಲಿ ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು,ಈ ಬಿಲ್ ಯಾರ ವಿರುದ್ಧವೂ ಅಲ್ಲ.ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಬಳಸಬೇಕಾದರೆ ಅನುಮತಿ ಪಡೆಯುವುದು ಅಗತ್ಯ.ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಬೇಕಾದರೂ ಪರ್ಮಿಷನ್ ತೆಗೆದುಕೊಳ್ಳಬೇಕು.ಇದರಲ್ಲಿ ಸಮಸ್ಯೆ ಏನಿದೆ? ಎಂದು ಪ್ರಶ್ನಿಸಿದರು.
ನಮ್ಮ ಪಕ್ಷ 140 ವರ್ಷ ಹಳೆಯದು.ಆದರೂ ನಾವು ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸುವಾಗ ಅನುಮತಿ ಪಡೆಯುತ್ತೇವೆ.ಕಾನೂನು ಪ್ರಕ್ರಿಯೆ ಮೂಲಕವೇ ಬಿಲ್ ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕಾಯ್ದೆಗೆ ನೋಂದಣಿಯಾಗದ ಸಂಘಟನೆಗಳ ಸಂಬಂಧವಿದೆ ಎಂಬ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು,ಈ ಕಾಯ್ದೆಗೆ ನೋಂದಾಯಿಸದ ಸಂಸ್ಥೆಗೂ ಸಂಬಂಧ ಇಲ್ಲ.ನಿಮ್ಮಲ್ಲಿ ಯಾವುದೇ ಸಲಹೆಗಳಿದ್ದರೆ ನೀಡಿ.ಅದನ್ನು ಸರ್ಕಾರ ಸ್ವಾಗತಿಸುತ್ತದೆ ಎಂದು ವಿರೋಧ ಪಕ್ಷಗಳ ಸದಸ್ಯರಿಗೆ ಸಲಹೆ ನೀಡಿದರು.
