ಹಿಂಡೆನ್ಬರ್ಗ್ ಆರೋಪ : ದೇಶಾದ್ಯಂತ ಆ.22ರಂದು ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್
ನವದೆಹಲಿ: ಅಮೆರಿಕದ ಸಂಶೋಧನೆ ಮತ್ತು ಹೂಡಿಕೆ ಕಂಪನಿ ಹಿಂಡೆನ್ಬರ್ಗ್ ಮಾಡಿರುವ ಆರೋಪಗಳ ಕುರಿತು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರ ರಾಜೀನಾಮೆಗೆ ಒತ್ತಾಯಿಸಿ ಆಗಸ್ಟ್ 22ರಂದು ರಾಷ್ಟ್ರವ್ಯಾಪಿ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗಿದೆ.ಇತ್ತೀಚೆಗೆ ಹಿಂಡೆನ್ಬರ್ಗ್ ತನ್ನ ವರದಿಯಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಕಡಲಾಚೆಯ ಅದಾನಿ ಸಂಸ್ಥೆಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿತ್ತು.
ಇದನ್ನೇ ಮುಂದಿಟ್ಟುಕೊಂಡು ಆಗಸ್ಟ್ 22ರಂದು ದೇಶಾದ್ಯಂತ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿ ರಾಜ್ಯದ ರಾಜಧಾನಿಯಲ್ಲಿ ಜಾರಿ ನಿರ್ದೇಶನಾಲಯದ ಕಚೇರಿಯನ್ನು ಘೇರಾವ್ ಮಾಡಲು ಕಾಂಗ್ರೆಸ್ ಮುಂದಾಗಿದೆ.
ಎರಡು ಬೇಡಿಕೆಗಳಿಗಾಗಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಮೊದಲನೆಯದಾಗಿ ಸೆಬಿ ಅಧ್ಯಕ್ಷೆ ಮಧಬಿ ಪುರಿ ಬುಚ್ ರಾಜೀನಾಮೆ ನೀಡಬೇಕು. ಮತ್ತೊಂದು ಅದಾನಿ ಗ್ರೂಪ್ ಹಗರಣದ ತನಿಖೆಗೆ ಜೆಪಿಸಿ ರಚಿಸಬೇಕು. ನಾವು ಈ ಎರಡು ವಿಷಯಗಳಿಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಆಂದೋಲನವನ್ನು ನಡೆಸಲು ಸರ್ವಾನುಮತದಿಂದ ನಿರ್ಧರಿಸಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಕೆ.ಸಿ.ವೇಣುಗೋಪಾಲ್ ತಿಳಿಸಿದರು.
