BlogLatestಬೆಳಗಾವಿ-Belagaviರಾಜ್ಯ-Karnataka

ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ ಒದಗಿಸದೇ ಸತಾಯಿಸುತ್ತಿರುವ ಅಧಿಕಾರಿ ವರ್ಗಾವಣೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ ಒದಗಿಸದೇ ವಿದ್ಯಾರ್ಥಿಗಳನ್ನು ಸತಾಯಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ಮಹಾಂತೇಶ ಚಿವಟಗುಂಡಿ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ, ಯುವ ಕರ್ನಾಟಕ ಭೀಮ ಸೇನೆ ಯುವ ಶಕ್ತಿ ಸಂಘದ ವತಿಯಿಂದ ನಗರದ ಸಮಾಜ ಕಲ್ಯಾಣ ಇಲಾಖೆ ಎದುರು ಪ್ರತಿಭಟಿಸಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

https://youtu.be/N_xdIyuj5ZI?si=l3Vf2CDdGvxfqLAR

ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸಮಾಜ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ನಿಯಮನುಸಾರ ವಸತಿ ಪ್ರವೇಶಾತಿ ಬಯಸಿ ಬಂದ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ವಸತಿ ನಿಲಯಗಳಲ್ಲಿ ಪ್ರವೇಶಾತಿ ಭರ್ತಿಯಾಗಿದ್ದರೂ ಕೂಡ ಬೇರೆ ಕಟ್ಟಡ ಬಾಡಿಗೆ ಪಡೆದು ವಸತಿ ಸೌಲಭ್ಯ ಕಲ್ಪಿಸಬೇಕು.ಆದರೆ, ಈ ತಾಲೂಕ ಅಧಿಕಾರಿ ಇಂದು, ನಾಳೆ, ನಾಡಿದ್ದು ಪ್ರವೇಶಾತಿ ಕೊಡುವುದಾಗಿ ಹೇಳಿ ಸತಾಯಿಸುತ್ತಿದ್ದಾರೆ. ಇದರಿಂದ ನಿತ್ಯ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಇದೆ.ಹೀಗಾಗಿ ಕೂಡಲೇ ಅವರನ್ನು ವರ್ಗಾವಣೆ ಮಾಡಿ ವಿದ್ಯಾರ್ಥಿಗಳಿಗೆ ಸ್ಪಂದಿಸುವ ಅಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ಸಂಸ್ಥಾಪಕ ಪ್ರವೀಣ ಮಾದರ ಮಾತನಾಡಿ, ಈ ಸಮಾಜ ಕಲ್ಯಾಣ ತಾಲೂಕಾ ಅಧಿಕಾರಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ವಿದ್ಯಾರ್ಥಿಗಳು ಕರೆ ಮಾಡಿ ಕೇಳಿದಾಗ ಸಭೆಗಳಿಗೆ ಹೋಗಿರುವೆ ಎಂದು ಸುಳ್ಳು ಹೇಳಿ ವಿದ್ಯಾರ್ಥಿಗಳನ್ನು ಅಲೆದಾಡಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸವು ಕುಂಠಿತವಾಗುತ್ತಿದೆ ಎಂದು ದೂರಿದ ಅವರು ಕೂಡಲೆ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮುಖಂಡ ಆಕಾಶ ಬೆವಿನಕಟ್ಟಿ, ಸುನಿಲ ನಾಯಿಕ, ಉದಯ ಬಸೋಜಿ, ಮಲ್ಲಪ್ಪಾ ಅಕಮಡ್ಡಿ, ರಾಜಶೇಖರ ಹಿಂಡಲಿಗಿ ಸೇರಿದಂತೆ ಇತರರು ಇದ್ದರು.

ವರದಿ :ದಯಾನಂದ

Share with Friends
author avatar
News Desk