Uncategorized

ಚನ್ನಗಿರಿ: ಆನ್‌ಲೈನ್ ಗೇಮ್ ಹೆಸರಿನಲ್ಲಿ ಹಣಕ್ಕೆ ಬೆದರಿಕೆ; 13 ವರ್ಷದ ಬಾಲಕ ಆತ್ಮಹತ್ಯೆ, 5 ಜನರ ವಿರುದ್ಧ ಪ್ರಕರಣ


POST 02

ಚನ್ನಗಿರಿ (ದಾವಣಗೆರೆ): ಆನ್‌ಲೈನ್ ‘ಫ್ರೀ ಫೈರ್’ ಗೇಮ್ ಐಡಿ ಕೊಡುವುದಾಗಿ ನಂಬಿಸಿ ಬಾಲಕನಿಂದ ಲಕ್ಷಾಂತರ ರೂಪಾಯಿ ಹಣ ಪೀಡಿಸಿ, ಬೆದರಿಕೆ ಹಾಗೂ ಕಿರುಕುಳ ನೀಡಿದ ಪರಿಣಾಮ ಮನನೊಂದ 8ನೇ ತರಗತಿ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ.

ಪಾಂಡೋಮಟ್ಟಿಯ ಬಸವ ಇಂಟರ್‌ನ್ಯಾಷನಲ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮನೋಜ್ ಟಿ.ಆರ್. (13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನು ಪಿ.ಆರ್., ಬೊಮ್ಮಲಿಂಗ ಹಾಗೂ ಕಾಲ್ಕೆರೆ ಗ್ರಾಮದ ಮಣಿ, ಸಂಜು ಮತ್ತು ಯಶವಂತ್ ಎಂಬ ಐವರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ರೂ. 4.11 ಲಕ್ಷ ಪೀಡಿಸಿ ಕೊಲೆ ಬೆದರಿಕೆ :
ಆರೋಪಿಗಳಲ್ಲಿ ಒಬ್ಬನಾದ ಮನು, ಆನ್‌ಲೈನ್ ಗೇಮ್ ಐಡಿ ನೀಡುವುದಾಗಿ ಹೇಳಿ ಆರಂಭದಲ್ಲಿ ಬಾಲಕನಿಂದ ₹6,000 ಪಡೆದಿದ್ದ. ಬಳಿಕ ಮತ್ತಷ್ಟು ಹಣ ನೀಡುವಂತೆ ಪೀಡಿಸಿ, ಬಾಲಕನನ್ನು ಬೈಕ್ ಹಾಗೂ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ದೈಹಿಕವಾಗಿ ಹಲ್ಲೆ ನಡೆಸಿ ಬೆದರಿಸುತ್ತಿದ್ದ ಎನ್ನಲಾಗಿದೆ. ಹಣ ನೀಡದಿದ್ದರೆ ಬಾಲಕ ಹಾಗೂ ಆತನ ಅಣ್ಣನನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದರಿಂದ, ಬಾಲಕ ಹೆದರಿ ಕುಟುಂಬಸ್ಥರಿಗೆ ತಿಳಿಯದಂತೆ ಹಂತ ಹಂತವಾಗಿ ಒಟ್ಟು ₹4.11 ಲಕ್ಷ ಹಣವನ್ನು ಆರೋಪಿಗಳಿಗೆ ನೀಡಿದ್ದಾಗಿ ಬಳಿಕ ತಿಳಿದುಬಂದಿದೆ.

ವಿಷಯ ತಿಳಿದ ಕುಟುಂಬದವರು ಹಾಗೂ ಗ್ರಾಮದ ಹಿರಿಯರು ಬಾಲಕನಿಗೆ ಧೈರ್ಯ ತುಂಬಿ ಬುದ್ಧಿವಾದ ಹೇಳಿದ್ದರೂ, ಆತ ಮಾನಸಿಕವಾಗಿ ತೀವ್ರ ಕುಗ್ಗಿದ್ದ. ಅಕ್ಟೋಬರ್ 7ರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಘಟನೆಯಿಂದ ಪಾಂಡೋಮಟ್ಟಿ ಗ್ರಾಮದಲ್ಲಿ ಶೋಕಾವೃತ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share with Friends
author avatar
Digital Desk