ಬ್ರಿಕ್ಸ್ ಶೃಂಗಸಭೆ: ದೆಹಲಿಯಲ್ಲಿ ಇಂದು ರಾತ್ರಿ ಟ್ರಾಫಿಕ್ ನಿರ್ಬಂಧ!

ನವದೆಹಲಿ: ಬ್ರಿಕ್ಸ್ ಶೃಂಗಸಭೆ 2026ರ ಹಿನ್ನೆಲೆಯಲ್ಲಿ ದೆಹಲಿ ಸಂಚಾರ ಪೊಲೀಸರು ಸಾರ್ವಜನಿಕರಿಗೆ ಮಹತ್ವದ ಟ್ರಾಫಿಕ್ ಸಲಹೆ ನೀಡಿದ್ದಾರೆ. ಸೆಪ್ಟೆಂಬರ್ 9ರಂದು ರಾತ್ರಿ 7ರಿಂದ 10ರವರೆಗೆ ವಿಐಪಿ ವಾಹನಗಳ ಸಂಚಾರ ತಾಲೀಮು ನಡೆಯಲಿದ್ದು, ನಗರದ 35ಕ್ಕೂ ಹೆಚ್ಚು ಪ್ರಮುಖ ರಸ್ತೆಗಳ ಸಂಚಾರದಲ್ಲಿ ಬದಲಾವಣೆ ಹಾಗೂ ನಿರ್ಬಂಧ ಜಾರಿಯಾಗಲಿದೆ.
ಸಂಚಾರ ನಿಯಂತ್ರಣಕ್ಕಾಗಿ 22 ಡೈವರ್ಷನ್ ಪಾಯಿಂಟ್‌ಗಳನ್ನು ಗುರುತಿಸಲಾಗಿದ್ದು, ಸರ್ಡಾರ್ ಪಟೇಲ್ ಮಾರ್ಗ್, ಅಕ್ಬರ್ ರಸ್ತೆ, ಮಥುರಾ ರಸ್ತೆ, ಜನಪಥ್, ಅಶೋಕ ರಸ್ತೆ ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಪರಿಣಾಮ ಬೀರುವ ಸಾಧ್ಯತೆಯಿದೆ.
ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಪ್ರಯಾಣದ ವೇಳೆ ಹೆಚ್ಚುವರಿ ಸಮಯ ಮೀಸಲಿಡುವಂತೆ ಪೊಲೀಸರು ಸೂಚಿಸಿದ್ದಾರೆ. ವಿಶೇಷವಾಗಿ ಸಲಹಾ ಅವಧಿಯಲ್ಲಿ ವಿಮಾನ ನಿಲ್ದಾಣ ಪ್ರಯಾಣಕ್ಕೆ ಮೆಟ್ರೋ ಬಳಸುವಂತೆ ಮನವಿ ಮಾಡಲಾಗಿದೆ.
ಬ್ರಿಕ್ಸ್ ಶೃಂಗಸಭೆ ಸೆಪ್ಟೆಂಬರ್ 11ರಿಂದ 13ರವರೆಗೆ ಭಾರತ್ ಮಂಟಪದಲ್ಲಿ ನಡೆಯಲಿದ್ದು, ವಿಐಪಿ ಸಂಚಾರದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲೂ ಸಂಚಾರ ನಿಯಂತ್ರಣ ಮುಂದುವರಿಯುವ ಸಾಧ್ಯತೆಯಿದೆ.
