LatestTop Storiesಕಲಬುರಗಿ-Kalaburagiರಾಜಕೀಯ | Politics

ಸ್ಟಿಂಗ್ ಆಪರೇಷನ್ : ಸಿಎಂ ಕೊರಳಿಗೆ ಉರುಳು

ಕಲಬುರಗಿ.ಅ.14- ರಾಜ್ಯ ರಾಜಕೀಯದಲ್ಲಿ ಭಾರೀ ಸಂಚನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಉರುಳು ಮುಖ್ಯಮಂತ್ರಿಗಳ ಕೊರಳಿಗೆ ಸುತ್ತಿಕೊಳ್ಳುವ ಆತಂಕ ಅವರನ್ನು ಕಾಡುತ್ತಿರಬಹುದು ಎಂದು
ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಟೀಕಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ವಿಚಾರವನ್ನು ಮೊದಲು ಬಹಿರಂಗಪಡಿಸಿದ್ದೇ ಡಿ.ಕೆ. ಶಿವಕುಮಾರ್. ಹೀಗಾಗಿ ಅವರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇರುವಂತಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ಬ್ರೇನ್ ಮ್ಯಾಪಿಂಗ್ ಮಾಡಲಿ:

ಸ್ಟಿಂಗ್ ಆಪರೇಷನ್ ಯಾರು ಮಾಡಿದ್ದಾರೆ, ಯಾರ ವಿರುದ್ಧ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಬ್ರೇನ್ ಮ್ಯಾಪಿಂಗ್ ನಡೆಸಲಿ. ಸದ್ಯ ಸ್ಟಿಂಗ್ ಆಪರೇಷನ್ ಕುರಿತು ಕಾಂಗ್ರೆಸ್‌ನಲ್ಲೇ ಹೆಚ್ಚು ಚರ್ಚೆ ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರ ಬ್ರೇನ್ ಮ್ಯಾಪಿಂಗ್ ನಡೆಸಿದರೆ ಎಲ್ಲ ವಿಚಾರಗಳು ಹೊರಬರಬಹುದು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡರ ಬ್ರೇನ್ ಮ್ಯಾಪಿಂಗ್ ನಡೆಸಿದರೂ ತಮ್ಮ ಅಭ್ಯಂತರವಿಲ್ಲ.ಸ್ಟಿಂಗ್ ಆಪರೇಷನ್ ವಿಚಾರವಾಗಿ ಮುಖ್ಯಮಂತ್ರಿ ಸರಣಿ ಸಭೆಗಳನ್ನು ನಡೆಸುತ್ತಿರುವುದರ ಹಿಂದಿನ ಉದ್ದೇಶದ ಬಗ್ಗೆ ಸಿ.ಟಿ.ರವಿ ಪ್ರಶ್ನಿಸಿದರು.

ಸಂಪುಟ ಸಭೆಯಲ್ಲೇ ಸ್ಟಿಂಗ್ ಬಗ್ಗೆ ಚರ್ಚೆ: ತನಿಖೆಗೆ ಆಗ್ರಹ

ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿಯೇ ಸ್ಟಿಂಗ್ ಆಪರೇಷನ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವಿಚಾರದ ಬಗ್ಗೆ ತನಿಖೆ ನಡೆಯಬೇಕಲ್ಲವೇ ಎಂದು ಸಿ.ಟಿ. ರವಿ ಪ್ರಶ್ನಿಸಿದರು.

ಗೃಹ ಸಚಿವರು ಸ್ಟಿಂಗ್ ಆಪರೇಷನ್ ಕುರಿತು ಮಾತನಾಡುತ್ತಿಲ್ಲ.ಸರ್ಕಾರದ ಅಂತರಂಗದ ವಿಚಾರಗಳು ಹೊರಬರುತ್ತವೆ ಎಂಬ ಕಾರಣಕ್ಕೆ ಮೌನವಾಗಿದ್ದಾರೆಯೇ ಅಥವಾ ಅವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲವೇ ಎಂಬುದು ತಿಳಿದಿಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ :

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ. ಒಂದು ವೇಳೆ ಸಿದ್ದರಾಮಯ್ಯರನ್ನು ಕಡೆಗಣಿಸುತ್ತಿಲ್ಲ ಎಂದಾದರೆ ಕಲಬುರಗಿಯಲ್ಲಿ ಸ್ಥಾಪಿಸಲಾದ ಅವರ ಪ್ರತಿಮೆಯನ್ನು ಸರ್ಕಾರ ತೆರವುಗೊಳಿಸುತ್ತಿರಲಿಲ್ಲ ಎಂದು ತಿಳಿಸಿದರು

ಮತಗಳ್ಳತನದ ಆರೋಪಕ್ಕೆ ತಿರುಗೇಟು :

ರಾಜ್ಯದಲ್ಲಿ ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೂ ಸಿ.ಟಿ. ರವಿ ತಿರುಗೇಟು ನೀಡಿದರು. ಮತಗಳ್ಳತನ ನಡೆದಿದ್ದರೆ ಕಲಬುರಗಿಯಲ್ಲೇ ಮಲ್ಲಿಕಾರ್ಜುನ ಖರ್ಗೆ ಅಳಿಯ ಹೇಗೆ ಗೆಲುವು ಸಾಧಿಸುತ್ತಿದ್ದರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಯಾವುದೇ ಆಧಾರವಿಲ್ಲದೆ ಬಿಜೆಪಿಯ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಎಸ್‌ಐಆರ್ ಪ್ರಕ್ರಿಯೆ ಸಮರ್ಥಿಸಿಕೊಂಡ ಸಿ.ಟಿ. ರವಿ:

ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿಯೇ ನಡೆಯುತ್ತಿದೆ ಎಂದು ಪ್ರತಿಪಾದಿಸಿದ ಸಿ.ಟಿ. ರವಿ, ಮತದಾರರ ಪಟ್ಟಿಯಲ್ಲಿ ಒಂದಕ್ಕಿAತ ಹೆಚ್ಚು ಬಾರಿ ಹೆಸರು ಹೊಂದಿರುವವರ ಹೆಸರುಗಳನ್ನು ತೆಗೆದುಹಾಕಬಾರದೇ ಎಂದು ಪ್ರಶ್ನಿಸಿದರು.

Share with Friends
author avatar
Digital Desk