LatestTop Storiesಬೆಂಗಳೂರು-Bengaluruರಾಜಕೀಯ | Politics

ಸ್ಟಿಂಗ್ ಆಪರೇಷನ್ : ನನ್ನ ಬಂಧಿಸಲು ಕಾಂಗ್ರೆಸ್ ಸರ್ಕಾರದಿಂದ ಪ್ಲಾನ್..!

ಬೆಂಗಳೂರು.ಅ.15- ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ‘ಸ್ಟಿಂಗ್ ಆಪರೇಷನ್’ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ ಖರ್ಗೆ ಹೋರಾಟಕ್ಕೆ ಬರುವಂತೆ ಪಂಥಾಹ್ವಾನ ನೀಡಿದ್ದು,ತಮ್ಮನ್ನು ಬಂಧಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಕುಮಾರಸ್ವಾಮಿ ಮೇಲೆ ಸಂಶಯ ಬಂದರೆ ಅವರನ್ನು ಕರೆಸಿ ವಿಚಾರಣೆ ನಡೆಸುತ್ತೇವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿ,ನನ್ನನ್ನು ಮುಟ್ಟಿ ನೋಡಿ. ಶ್ಯಾಂಗ್ರಿಲಾ ಹೋಟೆಲ್‌ನಲ್ಲಿ ಯಾರನ್ನು ಕರೆಸಿ ಚರ್ಚೆ ನಡೆಸಲಾಯಿತು? ನೈಸ್ ಗುತ್ತಿಗೆದಾರರ ಸಂದರ್ಶನವನ್ನು ಯಾರ ಕಡೆಯಿಂದ ಮಾಡಿಸಲಾಯಿತು? ಎಂದು ಪ್ರಶ್ನಿಸಿದ ಅವರು, ಧಮ್ ಇದ್ದರೆ ನನ್ನನ್ನು ಅರೆಸ್ಟ್ ಮಾಡಿಸಿ, ಆಗ ಕರ್ನಾಟಕ ಏನಾಗುತ್ತದೆ ಎಂದು ನೋಡುತ್ತೇನೆ ಎಂದು ಸವಾಲು ಹಾಕಿದರು.

ತಾಕತ್, ಯೋಗ್ಯತೆ ಇದ್ದರೆ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಿ. ಹೋರಾಟಕ್ಕೆ ರೆಡಿ ಇದ್ದೀನಿ, ಬನ್ನಿ ಅಖಾಡಕ್ಕೆ ಎಂದು ಸಿಎಂ ಡಿಕೆಶಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಪಂಥಾಹ್ವಾನವನ್ನೂ ನೀಡಿದ್ದಾರೆ. ನಿಮ್ಮದು ನಾನು ನೋಡದೆ ಇರುವ ಅಧಿಕಾರನಾ? ಎಂದು ಗುಡಗಿದರು

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ. ಕುಮಾರಸ್ವಾಮಿ, “ಒಂದು ಹೆಣ್ಣುಮಗಳನ್ನು ಕಳಿಸಿ, ಐದು ದಿನ ಎಚ್.ಡಿ. ರೇವಣ್ಣ ಅವರನ್ನು ಒಳಗೆ ಕಳಿಸಿದಿರಲ್ಲ, ಹಾಗೆಯೇ ನನ್ನನ್ನೂ ಒಳಗೆ ಕಳಿಸಲು ಪ್ಲಾನ್ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು.
ತನಿಖೆಗೆ ಒಳಗಾಗಬೇಕಾದ ವ್ಯಕ್ತಿಗಳು ಠಾಣೆಯಲ್ಲಿ ಆರಾಮವಾಗಿ ಫೋನ್‌ನಲ್ಲಿ ಮಾತನಾಡುವುದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ಸಂಪುಟದ ರಹಸ್ಯವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಯಾರು ಎಂದು ತರಾಟೆಗೆ ತೆಗೆದುಕೊಂಡರು.

ನೈಸ್ ಹಗರಣದ ಅಕ್ರಮಗಳು ಹೊರಬರಬಾರದು ಎಂಬ ಕಾರಣಕ್ಕೇ ಈ ಎಲ್ಲ ಕೃತ್ಯಗಳನ್ನು ಎಸಗಲಾಗುತ್ತಿದೆ. ಅಲ್ಲದೆ, ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ ವಿಡಿಯೋಗಳು ಬರಬಹುದು ಎಂದು ಹಿಂದೆ ರಮೇಶ್ ಜಾರಕಿಹೊಳಿ ಎಚ್ಚರಿಸಿದ್ದನ್ನು ಕುಮಾರಸ್ವಾಮಿ ನೆನಪಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ಗೆ ಪೆನ್ ಡ್ರೈವ್ ಕೊಟ್ಟ ಆ ಹೆಣ್ಣುಮಗಳು ಯಾರು? ಎಪ್‌ಐಆರ್ ದಾಖಲಾದ ಬಳಿಕವೂ ಏಕೆ ಅಪ್ಡೇಟ್ ಆಗಿಲ್ಲ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯನವರೇ ಹರಕೆ ಕುರಿಯಾಗಬೇಡಿ, ಧೈರ್ಯವಾಗಿ ಎದುರಿಸಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ನಡೆಯುತ್ತಿರುವ ಹೀನ ಕೃತ್ಯಗಳ ಬಗ್ಗೆ ಮಾತನಾಡಿದರೆ ಗೃಹ ಸಚಿವರು ತಮ್ಮ ವಿರುದ್ಧ ಕಠಿಣ ಪದಗಳನ್ನು ಬಳಸುತ್ತಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಇಡಿ ಎಂಟ್ರಿ ಆಗದಿದ್ದರೆ ಕೆಪಿಎಸ್‌ಸಿ ಹಗರಣ ಮುಚ್ಚಿಹೋಗುತ್ತಿತ್ತು ಎಂದ ಅವರು, ತಾವೇ ಕೆಪಿಎಸ್‌ಸಿ ಅಕ್ರಮದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರೂ ಸರ್ಕಾರ ಇಲ್ಲಿಯವರೆಗೆ ಯಾವುದೇ ಉತ್ತರ ನೀಡಿಲ್ಲ.ಜೊತೆಗೆ ರಾಜ್ಯದ ಜನತೆಗೆ ವಿಕೃತ ಮನಸ್ಸಿನ ಮುಖ್ಯಮಂತ್ರಿ ಬೇಕೇ ಎಂದು ನೇರ ಪ್ರಶ್ನೆ ಹಾಕಿದರು.

Share with Friends
author avatar
Digital Desk