
ಹುಲ್ಲೂರು ಗ್ರಾಮದ ಹಳ್ಳದ ನೀರಿನಲ್ಲಿ ಯುವಕನ ಶವ ಪತ್ತೆ – ಅನುಮಾನಾಸ್ಪದ ಸಾವು..!
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಇಂದು ಅನುಮಾನಾಸ್ಪದ ಸಾವು ಸಂಭವಿಸಿರುವ ಘಟನೆ ನಡೆದಿದೆ.ಹುಲ್ಲೂರು ಗ್ರಾಮದ ಹಳ್ಳದ ನೀರಿನಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಸಾವನಪ್ಪಿರುವ ವ್ಯಕ್ತಿಯನ್ನು ಸುಭಾಸ್ ತಂದೆ ರಾಮಣ್ಣ ಮಾದರ ವಯಸ್ಸು 28 ಎಂದು ಗುರುತಿಸಲಾಗಿದೆ. ಅವರು ಹುಲ್ಲೂರು ಗ್ರಾಮದ ನಿವಾಸಿಯಾಗಿದ್ದಾರೆ.
ಶವ ಪತ್ತೆಯಾಗುತ್ತಿದ್ದಂತೆ ಸ್ಥಳಕ್ಕೆ ಬಾಗೇವಾಡಿ ಡಿವೈಎಸ್ಪಿ ಮತ್ತು ಮುದ್ದೇಬಿಹಾಳ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಸಾವಿನ ಬಗ್ಗೆ ಮನೆಯವರಿಂದ ಅನುಮಾನಾಸ್ಪದ ಸಾವು ಎಂದು ಆರೋಪ ಕೇಳಿಬಂದಿದೆ. ಸುಭಾಸ್ ಸಾವು ಸಹಜವಾಗಿ ಆಗಿಲ್ಲ, ಇದರ ಹಿಂದೆ ಕೈವಾಡ ಇರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆಗೆ ಮನೆಯವರು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಿಂದ ಹುಲ್ಲೂರು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
