
ಶಿರಾ ತಾಲೂಕಿನಲ್ಲಿ ಮಳೆಗಾಗಿ ಶ್ರೀ ಜಗದಂಬೆ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಗ್ರಾಮಸ್ಥರು
ತುಮಕೂರು,ಸೆ15 : ವಿನಾಯಕ ಚತುರ್ಥಿಯ ಪವಿತ್ರ ದಿನದಂದು ಶಿರಾ ತಾಲೂಕು ಕೆ.ಕೆ. ಪಾಳ್ಯ ಗ್ರಾಮದೇವತೆಯಾದ ಶ್ರೀ ಜಗದಂಬೆ ದೇವಿಯನ್ನು ಗ್ರಾಮದ ಹೊಳೆಗೆ ಕರೆದುಕೊಂಡು ಹೋಗಿ, ಶಾಸ್ತ್ರೋಕ್ತವಾಗಿ ಗಂಗಮ್ಮನ ಪೂಜೆ ನೆರವೇರಿಸಿದರು .
ಈ ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ದೇವರ ಕೃಪೆಯೇ ಕಾರಣವೆಂದು ನಂಬುವ ನಾವು, ಮಳೆ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ಈ ಬರಗಾಲದ ಸಂದರ್ಭದಲ್ಲಿ, ಆದಷ್ಟು ಬೇಗ ಉತ್ತಮ ಮಳೆ ಸುರಿದು ಭೂಮಿ ಹಸಿರಾಗಲಿ, ಬೆಳೆಗಳು ಸಮೃದ್ಧಿಯಾಗಿ ರೈತರ ಬದುಕು ನೆಮ್ಮದಿಯಾಗಲಿ ಹಾಗೂ ದನಕರುಗಳಿಗೆ ಕುಡಿಯುವ ನೀರು ದೊರಕುವಂತಾಗಲಿ ಎಂದು ಪ್ರಾರ್ಥಿಸಿದರು.
ನಂತರ ಊರಿನ ಎಲ್ಲಾ ಮನೆಗಳವರು ಒಗ್ಗಟ್ಟಾಗಿ ಸೇರಿ ತಂಬಿಟ್ಟಿನ ಆರತಿ ಬೆಳಗಿ, ಶ್ರೀದೇವಿಯಲ್ಲಿ ಉತ್ತಮ ಮಳೆಗಾಗಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.ಶ್ರೀ ಜಗದಂಬೆ ದೇವಿಯ ಕೃಪೆಯಿಂದ ಕೆ.ಕೆ. ಪಾಳ್ಯ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆದಷ್ಟು ಬೇಗ ಉತ್ತಮ ಮಳೆ ಸುರಿದು, ಕೆರೆ-ಕಟ್ಟೆಗಳು ತುಂಬಿ, ರೈತರ ಹೊಲಗಳು ಸಮೃದ್ಧಿಯಾಗಿ, ಎಲ್ಲರ ಬದುಕಿನಲ್ಲಿ ನೆಮ್ಮದಿ ಸಿಗಲಿ ಎಂದು ನಾಗರಿಕರು ತಿಳಿಸಿದ್ದಾರೆ.
