
ಬಂಡಾಯ ಎದ್ದವರಿಗೆ ಬಂಡೆ ಪೆಟ್ಟು : ಡಿಕೆಶಿ ಒಂದೇ ಡೈಲಾಗಿಗೆ ಅಸಮಾಧಾನಿತರು ಸೈಲೆಂಟ್..!
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರು ಹಾಗೂ ಹಿರಿಯ ನಾಯಕರ ಚಟುವಟಿಕೆಗಳು ಮತ್ತೆ ವೇಗ ಪಡೆದುಕೊಂಡಿವೆ. ಅಸಮಾಧಾನಿತರ ಮತ್ತೊಂದು ಸುತ್ತಿನ ಸಭೆ ಇಂದು ನಡೆಯಲಿದ್ದು, ಮುಂದಿನ ರಾಜಕೀಯ ನಡೆ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕೆಲ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವು ಶಾಸಕರು ಸಾಮೂಹಿಕ ರಾಜೀನಾಮೆಯ ಪ್ರಸ್ತಾಪವನ್ನೂ ಮುಂದಿಟ್ಟಿದ್ದರು. ಈ ಬೆಳವಣಿಗೆಗಳ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಯಾರಾದರೂ ರಾಜೀನಾಮೆ ನೀಡಲು ಬಂದರೆ ಕ್ಷಣದಲ್ಲೇ ಅಂಗೀಕರಿಸುತ್ತೇನೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಯ ನಂತರ ಅಸಮಾಧಾನಿತ ಶಾಸಕರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗದ ಶಾಸಕರು, “ನಾವು ಯಾವುದೇ ರಾಜೀನಾಮೆ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಅಸಮಾಧಾನದ ಹೊಗೆ ಇನ್ನೂ ಸಂಪೂರ್ಣ ತಣ್ಣಗಾಗಿಲ್ಲ.
ಇಂದು ನಡೆಯಲಿರುವ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳ ಅಸಮಾಧಾನಿತ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಈ ಸಭೆಗೆ ನಾರಾಯಣಸ್ವಾಮಿ ಹಾಗೂ ಅಶೋಕ್ ಪಟ್ಟಣ್ ನೇತೃತ್ವ ವಹಿಸಲಿದ್ದು, ಮುಂದಿನ ರಾಜಕೀಯ ತಂತ್ರ, ಪಕ್ಷದ ವರಿಷ್ಠರಿಗೆ ತಮ್ಮ ಅಸಮಾಧಾನವನ್ನು ತಲುಪಿಸುವ ವಿಧಾನ ಹಾಗೂ ಸಂಘಟಿತ ಹೋರಾಟದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದೇ ವೇಳೆ, ಅಸಮಾಧಾನಿತ ನಾಯಕರು ತಮ್ಮ ಶಕ್ತಿ ಪ್ರದರ್ಶನದ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಅವರ ಕಠಿಣ ನಿಲುವು ಅಸಮಾಧಾನಿತರ ಮುಂದಿನ ಹೆಜ್ಜೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಇಂದಿನ ಅಸಮಾಧಾನಿತರ ಸಭೆಯಲ್ಲಿ ಯಾವ ನಿರ್ಧಾರ ಹೊರಬೀಳಲಿದೆ? ಕಾಂಗ್ರೆಸ್‌ನೊಳಗಿನ ಭಿನ್ನಮತ ಶಮನವಾಗುತ್ತದೆಯೇ ಅಥವಾ ಹೊಸ ರಾಜಕೀಯ ಬೆಳವಣಿಗೆಗೆ ವೇದಿಕೆ ಸಿದ್ಧವಾಗುತ್ತದೆಯೇ ಎಂಬುದರತ್ತ ರಾಜ್ಯದ ಚಿತ್ತ ನೆಟ್ಟಿದೆ.
