
ಶಿವಾಜಿ ಜೀವನ ಚರಿತ್ರೆ ರೂಪಕದ ಮೂಲಕ ಜಾಗೃತಿ: ಗಣೇಶ ಮಂಡಳಿಗೆ ಸನ್ಮಾನ
ಹುಬ್ಬಳ್ಳಿ ಸೆ 27: ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ, ಐತಿಹಾಸಿಕ ಅರಿವು ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ವೇದಿಕೆಯನ್ನಾಗಿ ರೂಪಿಸಿದ ರೈಲ್ವೆ ಸ್ಟೇಷನ್ ರಸ್ತೆ ಗಣೇಶ ಮಂಡಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆ ಗಣೇಶ ಮಂಡಳಿಯ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ರೂಪಕದ ಮೂಲಕ ಅನಾವರಣಗೊಳಿಸಿ, ಯುವಜನರಲ್ಲಿ ದೇಶಭಕ್ತಿ, ಶೌರ್ಯ, ಧೈರ್ಯ ಹಾಗೂ ಐತಿಹಾಸಿಕ ಪ್ರಜ್ಞೆ ಮೂಡಿಸುವ ಪ್ರಯತ್ನ ಮಾಡಲಾಗಿತ್ತು. ಮಂಡಳಿಯ ಈ ವಿಭಿನ್ನ ಹಾಗೂ ಅರ್ಥಪೂರ್ಣ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ದುರ್ಗಾ ದೇವಿ ಬೈಲ್ ಸಿಬಿಟಿ ರಸ್ತೆಯ ಮರಾಠವಾಡದ ಗೌಳಿಗಲ್ಲಿಯ ಶ್ರೀ ದುರ್ಗಾ ಶಕ್ತಿ ಗ್ರೂಪ್ಸ್, ಶ್ರೀ ರಾಜಾಚಂದ್ರಗುಪ್ತ ಮೌರ್ಯ ಟ್ರಸ್ಟ್ (ರಿ), ಶ್ರೀ ವೀರ ಛತ್ರಪತಿ ಯುವಸೇನೆ ಕರ್ನಾಟಕ ರಾಜ್ಯ (ರಿ.) ಹಾಗೂ ಶ್ರೀ ಸಂತೋಷ ಲಾಡ್ ಯುವ ಮರಾಠ ವಾರಿಯರ್ಸ್ ಬಳಗ ವತಿಯಿಂದ ಗಣೇಶ ಮಂಡಳಿಯ ಸದಸ್ಯರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಣೇಶೋತ್ಸವದಂತಹ ಜನಸಂಪರ್ಕದ ವೇದಿಕೆಯನ್ನು ಬಳಸಿಕೊಂಡು ಯುವ ಸಮುದಾಯಕ್ಕೆ ಇತಿಹಾಸದ ಮಹತ್ವ ತಿಳಿಸುವ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಶಕ್ತಿ ಗ್ರೂಪ್ಸ್ನ ಸದಸ್ಯರಾದ ವಿಶಾಲ ವಾಘಮೋಡೆ, ವಿಶಾಲ ಕಾಳೆ, ಶ್ರೀಕಾಂತ್ ಅಸವಾಳೇಕರ, ಸುಭಾಸ, ಪುಟ್ಟಣ್ಣ, ಉಮೇಶ, ಬ್ರಿಜೇಶ್, ಪ್ರಕಾಶ, ಪ್ರಶಾಂತ, ಸುಭಾಷ್, ವೆಂಕಟೇಶ ಹಾಗೂ ಗಣೇಶ ಮಂಡಳಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
