LatestTop Storiesಕೋಲಾರ-Kolaraಜಿಲ್ಲಾ ಸುದ್ದಿಗಳು | District News

ಮುಳಬಾಗಿಲಿನಲ್ಲಿ ಪ್ರಾಣ ಭಯದ ಪಾಠ : 11 ಮಕ್ಕಳ ಜೀವಕ್ಕೆ ಕಂಟಕ..!

ಕೋಲಾರ ಸೆ. 27- ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಗುಮ್ಮಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಸರ್ಕಾರ ಸಾವಿರಾರು ಕೋಟಿ ಅನುದಾನ ಕೊಡ್ತಿದೆ, ಸರ್ಕಾರಿ ಶಾಲೆ ಉಳಿಸಿ ಅಂತಿದೆ, ಆದ್ರೆ ಗಡಿಭಾಗದ ಈ ಶಾಲೆಯತ್ತ ಅಧಿಕಾರಿಗಳೇ ತಿರುಗಿ ನೋಡ್ತಿಲ್ಲ.

ಗುಮ್ಮಕಲ್ಲು ಪಂಚಾಯಿತಿಯ ರಾಯಲಮಾನದಿನ್ನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. 1 ರಿಂದ 5ನೇ ತರಗತಿವರೆಗೆ ಕೇವಲ 11 ಮಕ್ಕಳು ಓದುತ್ತಿದ್ದಾರೆ. ಶಾಲೆಗೆ ಮೂಲಭೂತ ಸೌಕರ್ಯವೇ ಇಲ್ಲ. ಶಾಲೆಯ ಮೇಲ್ಚಾವಣಿ ಸಂಪೂರ್ಣ ಬಿರುಕು ಬಿಟ್ಟಿದೆ. ಸಿಮೆಂಟ್ ಚೂರು, ಕಲ್ಲು, ತುಕ್ಕು ಹಿಡಿದ ಕಬ್ಬಿಣದ ಚುರುಗಳು ಮಕ್ಕಳ ಮೇಲೆ ಬೀಳ್ತಾ ಇದೆ. ಮಕ್ಕಳು ಪ್ರಾಣ ಭೀತಿಯಲ್ಲಿ ಪಾಠ ಕೇಳುವ ಪರಿಸ್ಥಿತಿ. ಶಿಕ್ಷಕರಿಗೂ ಜೀವ ಭಯ.

ಶಾಲೆಯ ಪಕ್ಕದಲ್ಲೇ ಇರೋ ಬಿಸಿಯೂಟದ ಅಡುಗೆ ಕೋಣೆಯ ಸ್ಥಿತಿಯೂ ಇದೇ. ಮೇಲ್ಚಾವಣಿ ಬಿರುಕು, ಮಳೆ ಬಂದ್ರೆ ನೀರು ಸೋರಿಕೆ. ಯಾವಾಗ ಕುಸಿದು ಬೀಳುತ್ತೋ ಅನ್ನೋ ಆತಂಕದಲ್ಲಿ ಸಿಬ್ಬಂದಿ ಅಡುಗೆ ಮಾಡುವಂತಾಗಿದೆ.

ಇದು ಆಂಧ್ರ-ಕರ್ನಾಟಕ ಗಡಿ ಭಾಗದ ಶಾಲೆ. ಶಾಲಾ ಸಿಬ್ಬಂದಿ ಹಲವು ಬಾರಿ ಗುಮ್ಮಕಲ್ಲು ಪಂಚಾಯಿತಿಗೆ, BEO ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಆದ್ರೆ SDMC ಸದಸ್ಯರು, ಪಂಚಾಯಿತಿ PDO, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಯಾರೇ ಅನ್ನೋದೇ ಇಲ್ಲ. ಕಾಂಪೌಂಡ್ ಇಲ್ಲದ ಕಾರಣ ಮಕ್ಕಳು ಪ್ರತಿದಿನ ಪರದಾಡುವಂತಾಗಿದೆ. ಇದರಿಂದಲೇ ಮಕ್ಕಳ ದಾಖಲಾತಿ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ.

ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಅಭಿವೃದ್ಧಿ ಪಡಿಸಬೇಕು ಅನ್ನೋದು ಸರ್ಕಾರದ ಘೋಷಣೆ. ಆದ್ರೆ ಗಡಿ ಭಾಗದ ಶಾಲೆಗಳ ಸ್ಥಿತಿ ಮಾತ್ರ ಶೋಚನೀಯ. ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿ, ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಮಕ್ಕಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಅನಾಹುತಕ್ಕೂ ಮುನ್ನ ಶಾಲೆಯನ್ನು ದುರಸ್ತಿ ಮಾಡಬೇಕು ಎಂಬುದು ಸಂಪೂರ್ಣ ನ್ಯೂಸ್ ತಂಡದ ಆಗ್ರಹವಾಗಿದೆ.

Share with Friends
author avatar
Digital Desk