ಬಾಂಗ್ಲಾದೇಶ ಹಂಗಾಮಿ ಪ್ರಧಾನಿ ವಿರುದ್ಧ ನರಮೇಧದ ದೂರು ದಾಖಲು
ಢಾಕಾ: ಬಾಂಗ್ಲಾದೇಶದ ಹಂಗಾಮಿ ಪ್ರಧಾನಿ ಮುಹಮ್ಮದ್ ಯೂನಸ್ ವಿರುದ್ಧ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್‌ನಲ್ಲಿ ನರಮೇಧದ ದೂರು ದಾಖಲಿಸಲಾಗಿದೆ.ಅವಾಮಿ ಲೀಗ್ ಮತ್ತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಶೇಖ್ ಹಸೀನಾ ಅವರ ಪಕ್ಷದ ನಾಯಕರೊಬ್ಬರಾದ ಸಿಲ್ಹೆಟ್‌ನ ಮಾಜಿ ಮೇಯರ್ ಅನ್ವಾರುಜ್ಜಮಾನ್ ಚೌಧರಿ ಎನ್ನುವವರು ಮುಹಮ್ಮದ್ ಯೂನಸ್ ಹಾಗೂ 61 ಜನರ ವಿರುದ್ಧ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಈ 62 ಆರೋಪಿಗಳಲ್ಲಿ ಯೂನಸ್ ಅವರ ಕ್ಯಾಬಿನೆಟ್‌ನ ಎಲ್ಲಾ ಸದಸ್ಯರು ಮತ್ತು ತಾರತಮ್ಯ ವಿರೋಧಿ ಒಕ್ಕೂಟದ ವಿದ್ಯಾರ್ಥಿ ನಾಯಕರು ಸೇರಿದ್ದಾರೆ. ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ ಅವಾಮಿ ಲೀಗ್‌ನ ಕಾರ್ಯಕರ್ತರು ದೇಶದಲ್ಲಿ ಹತ್ಯಾಕಾಂಡಕ್ಕೆ ಬಲಿಯಾಗಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.
ಮೊಹಮ್ಮದ್ ಯೂನಸ್ ವಿರುದ್ಧ ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು ಕಾನೂನು ಜಾರಿ ಸಂಸ್ಥೆಗಳು ಮತ್ತು ಅವಾಮಿ ಲೀಗ್‌ನ ಸದಸ್ಯರ ಮೇಲೆ ದೌರ್ಜನ್ಯ ಮತ್ತು ಜನಾಂಗೀಯ ಹತ್ಯೆಯ ಆರೋಪಗಳಿವೆ.
