
ತುಂಗಭದ್ರಾ ಡ್ಯಾಂಗೆ ಒಂದೇ ದಿನದಲ್ಲೇ ಬರೋಬ್ಬರಿ 4.110 ಟಿಎಂಸಿ ನೀರು
ಬಳ್ಳಾರಿ,ಜು.10: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ ಬಂದಿದೆ.
ಸದ್ಯ ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಸದ್ಯ 17.511 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಮಲೆನಾಡಿನ ಮುಂಗಾರು ಮಳೆಯ ಆರ್ಭಟದಿಂದಾಗಿ ಜಲಾಶಯಕ್ಕೆ ಪ್ರಸ್ತುತ 49,728 ಕ್ಯೂಸೆಕ್ ಒಳಹರಿವು ದಾಖಲಾಗಿದೆ.ಅಲ್ಲದೆ, ಜಲಾಶಯದಿಂದ ಕುಡಿಯುವ ನೀರು ಹಾಗೂ ಇತರೆ ಅಗತ್ಯಗಳಿಗಾಗಿ ವಿವಿಧ ಕಾಲುವೆಗಳ ಮೂಲಕ ಕೇವಲ 180 ಕ್ಯೂಸೆಕ್ ನೀರಿನ ಹೊರಹರಿವು ಇದ್ದು,ಜಲಾಶಯದ ನೀರಿನ ಮಟ್ಟ ಗಂಟೆಯಿAದ ಗಂಟೆಗೆ ಏರಿಕೆಯಾಗುತ್ತಿದೆ.

ಈ ಮೂಲಕ ತುಂಗಭದ್ರಾ ನಂಬಿರುವ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಆತಂಕ ದೂರಾಗಲಿದೆ.ಇನ್ನು ಕಳೆದ ಕೆಲ ದಿನಗಳಿಂದ ಜಲಾನಯನ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಜೋರಾಗಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, 24 ಗಂಟೆಗಳ ಅವಧಿಯಲ್ಲಿ ಜಲಾಶಯಕ್ಕೆ ಬರೋಬ್ಬರಿ 4.110 ಟಿಎಂಸಿ ನೀರು ಹರಿದು ಬಂದಿದ್ದು, ರೈತಾಪಿ ವಲಯದಲ್ಲಿ ಸಂತಸ ಮೂಡಿಸಿದೆ.
