
ಗದಗದ ಲಕ್ಷ್ಮೇಶ್ವರದಲ್ಲಿ 2.5 ವರ್ಷದ ಮಗುವಿನ ತಲೆಗೆ ಗಂಭೀರ ಗಾಯ
ಗದಗ : ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ತೀವ್ರಗೊಂಡಿದೆ. ವಾರ್ಡ್ ನಂ.5ರ ಮಕಾನ ಓಣಿಯಲ್ಲಿ ಎರಡೂವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಮಗುವಿನ ತಲೆಗೆ ಗಂಭೀರ ಗಾಯಗಳಾಗಿವೆ.ಲಕ್ಷ್ಮೇಶ್ವರದ ಮಕಾನ ಓಣಿ ನಿವಾಸಿ ರಾಹಾ ಗಾಡಿವಾಲೆ ಎಂಬ 2.5 ವರ್ಷದ ಮಗು ಮನೆಯಿಂದ ಚಿಪ್ಸ್ ತರಲು ಹತ್ತಿರದ ಅಂಗಡಿಗೆ ತೆರಳುತ್ತಿತ್ತು. ಈ ವೇಳೆ ಏಕಾಏಕಿ ಅಲ್ಲಿಗೆ ನುಗ್ಗಿದ ಬೀದಿ ನಾಯಿಯೊಂದು ಮಗುವಿನ ಮೇಲೆ ಎರಗಿದೆ.
ನಾಯಿ ಮಗುವಿನ ತಲೆಗೆ ಬಲವಾಗಿ ಕಚ್ಚಿದ್ದು, ರಕ್ತ ಸೋರುವಂತಾಗಿದೆ. ಮಗುವಿನ ಕೂಗು ಕೇಳಿ ಸ್ಥಳೀಯರು ಓಡಿ ಬಂದು ಕೂಡಲೇ ನಾಯಿಯನ್ನು ಓಡಿಸಿ ಮಗುವನ್ನು ರಕ್ಷಿಸಿದರು.ತಕ್ಷಣವೇ ಕುಟುಂಬಸ್ಥರು ಮತ್ತು ಸ್ಥಳೀಯರ ನೆರವಿನಿಂದ ಗಾಯಗೊಂಡ ಮಗುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ತುರ್ತು ಚಿಕಿತ್ಸೆ ನೀಡಲಾಗಿದ್ದು, ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಗುವೊಂದರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದ ಘಟನೆ ನಡೆದಿತ್ತು. ಇದೀಗ ಮತ್ತೆ ಚಿಕ್ಕ ಮಗುವಿನ ಮೇಲೆ ದಾಳಿಯಾಗಿರುವುದು ಪಟ್ಟಣದಲ್ಲಿ ಆತಂಕ ಸೃಷ್ಟಿಸಿದೆ.ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಳೆದ ಹಲವು ತಿಂಗಳಿಂದ ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿದೆ. ಶಾಲೆಗೆ ಹೋಗುವ ಮಕ್ಕಳು, ವೃದ್ಧರು ಸಂಜೆ ವೇಳೆ ಹೊರಗೆ ಓಡಾಡಲು ಭಯಪಡುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.”ಮಗು ಸಾಯುವವರೆಗೂ ಕಾಯುತ್ತಿದ್ದೀರಾ? ಕೂಡಲೇ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಮತ್ತು ಲಸಿಕೆ ನೀಡುವ ಕಾರ್ಯ ಮಾಡಿ” ಎಂದು ಸ್ಥಳೀಯರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
