LatestTop Storiesಗದಗ-Gadagಜಿಲ್ಲಾ ಸುದ್ದಿಗಳು | District News

ಅನುದಾನ ಬಾರದಿದ್ದಕ್ಕೆ ಆತ್ಮಹತ್ಯೆ ಪತ್ರ ಬರೆದಿಟ್ಟು KRIDL, AEE ನಾಪತ್ತೆ!

ಗದಗ.ಸೆ.26- ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದು ಗದಗದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ಫರ್ವೀಜ್ ಧಾರವಾಡ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಧಿಕಾರಿ ಫರ್ವೀಜ್ ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ತಮ್ಮ ಉಪವಿಭಾಗಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದಿರುವುದರಿಂದ ಗುತ್ತಿಗೆದಾರರಿಂದ ಒತ್ತಡ ಹಾಗೂ ಕಿರುಕುಳ ಎದುರಿಸುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸಬ್ ಗುತ್ತಿಗೆದಾರರು ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದರು ಹಾಗೂ ನಿರಂತರವಾಗಿ ಫೋನ್ ಮಾಡಿ ಒತ್ತಡ ಹೇರುತ್ತಿದ್ದರು. ಇದರಿಂದ ತಮ್ಮ ಮೇಲೆ ಮಾನಸಿಕವಾಗಿ ತೀವ್ರ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಿರುವ ಅವರು, ತಮ್ಮ ಉಪವಿಭಾಗಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಹಾಗೂ ಬೇರೆ ಎಇಇಯನ್ನು ನಿಯೋಜಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ತಮ್ಮ ಕುಟುಂಬದವರಿಗೆ ಯಾವುದೇ ರೀತಿಯ ಕಿರುಕುಳ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸೆ.13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಮನೆಯಿಂದ ತೆರಳಿದ್ದ ಫರ್ವೀಜ್ ಬಳಿಕ ನಾಪತ್ತೆಯಾಗಿದ್ದಾರೆ.ಸೆಪ್ಟೆಂಬರ್ 16ರಂದು ಕುಟುಂಬಸ್ಥರು ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕುಟುಂಬಸ್ಥರ ಅಳಲು, ದೂರು ದಾಖಲು :

ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೊರಟಿದ್ದ ಫರ್ವೀಜ್, ಪತ್ನಿ ಸೆಗುಪ್ತಾರಿಗೆ ಕರೆ ಮಾಡಿ ಬೆಂಗಳೂರು ತಲುಪಿರುವುದಾಗಿ ಹೇಳಿದ್ದರು. ನಂತರ ಗಂಡನ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಗಾಬರಿಗೊಳಗಾದ ಪತ್ನಿ, ಅತ್ತೆ ಮಾವನಿಗೆ ವಿಷಯ ತಿಳಿಸಿದ್ದರು. ಮಗನ ಕುರಿತು ವಿಚಾರಿಸಲು ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ ಕರೆ ಮಾಡಿದಾಗ, ಫರ್ವೀಜ್ ಆಫೀಸಿಗೆ ಬಂದಿಲ್ಲವೆಂಬುದು ಕುಟುಂಬಸ್ಥರಿಗೆ ತಿಳಿದಿದೆ.

ಇದರಿಂದ ಆತಂಕಕ್ಕೊಳಗಾದ ಕುಟುಂಬಸ್ಥರು, ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 16ರಂದು ಪ್ರಕರಣ ದಾಖಲಿಸಿದ್ದಾರೆ. ವಿಶೇಷ ಪಡೆ ರಚಿಸಿ ಅಧಿಕಾರಿಯನ್ನು ಶೀಘ್ರವೇ ಪತ್ತೆ ಹಚ್ಚಬೇಕು ಮತ್ತು ಅವರಿಗೆ ಎದುರಾಗಿರುವ ಸಮಸ್ಯೆಯನ್ನು ಸರ್ಕಾರ ತಕ್ಷಣವೇ ಬಗೆಹರಿಸಬೇಕೆಂದು ಕಂಗಾಲಾಗಿರುವ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬೆಟಗೇರಿ ಬಡಾವಣೆ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

Share with Friends
author avatar
Digital Desk