
ಮೀಸಲಾತಿ ವಿರೋಧಿ ಹೋರಾಟಗಾರರನ್ನು ಭೇಟಿಯಾಗಲಿರುವ ಕೇಂದ್ರ ಸಚಿವರು
ಲಖನೌ: ಮೀಸಲಾತಿ ಸುಧಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಬೇಡಿಕೆಗಳನ್ನು ಬಿಜೆಪಿ ಕೇಂದ್ರ ನಾಯಕತ್ವದ ಮುಂದಿಡಲಾಗುವುದು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ.
ದೆಹಲಿಯ ಜಂತರ್ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಪ್ರತಿನಿಧಿಗಳೊಂದಿಗೆ ಲಖನೌನಲ್ಲಿ ಸುದ್ದಿಗೋಷ್ಠಿ ನಡೆಸಿದ ಪಾಠಕ್, ಪ್ರತಿಭಟನಾಕಾರರ ನಿಯೋಗವು ಮುಂದಿನ ಎರಡು ದಿನಗಳಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಲಿದೆ ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರ ಎಚ್ಚರಿಕೆಯಿಂದ ಆಲಿಸಿದೆ. ಅವರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಾಠಕ್ ಹೇಳಿದರು. ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಯನ್ನು ಬಿಜೆಪಿ ಕೇಂದ್ರ ನಾಯಕತ್ವಕ್ಕೂ ಕಳುಹಿಸಲಾಗುವುದು ಎಂದು ತಿಳಿಸಿದರು.
ಯುವಕರ ಪರ ಸರ್ಕಾರ ನಿಂತಿದ್ದು, ಅವರ ಆಶಯಗಳನ್ನು ಈಡೇರಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಹರ್ಷ್ ದುಬೆ, ಮೃತ್ಯುಂಜಯ ಪಾಠಕ್ ಹಾಗೂ ಶಿವ ಶರ್ಮಾ ಸೇರಿದಂತೆ ಮೀಸಲಾತಿ ವಿರೋಧಿ ಹೋರಾಟಗಾರರು ಈ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ.
ಯುವಜನರಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಹರ್ಷ್ ದುಬೆ ತಿಳಿಸಿದರು. ಕೇಂದ್ರ ಸಚಿವರೊಂದಿಗೆ ಎರಡು ದಿನಗಳಲ್ಲಿ ಸಭೆ ನಡೆಸುವ ಭರವಸೆ ನೀಡಿದ ಉಪಮುಖ್ಯಮಂತ್ರಿಗೆ ಅವರು ಧನ್ಯವಾದ ಸಲ್ಲಿಸಿದರು.
