LatestTop Storiesರಾಷ್ಟ್ರೀಯ-National

4 ವರ್ಷದೊಳಗಿನ ಮಕ್ಕಳಿಗೆ ಈ ಔಷಧಿಗಳ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕ್ಲೋರ್ಫೆನಿರಮೈನ್ ಮೆಲೇಟ್ ಮತ್ತು ಫಿನೈಲೆಫ್ರಿನ್ ಹೈಡ್ರೋಕ್ಲೋರೈಡ್ ಒಳಗೊಂಡಿರುವ ಔಷಧಿಗಳ ಬಳಕೆಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಎರಡೂ ಔಷಧಿಗಳನ್ನು ಒಳಗೊಂಡ ಫಿಕ್ಸ್ಡ್ ಡೋಸ್ ಕಾಂಬಿನೇಷನ್ (FDC) ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಸೂಚನೆ ನೀಡಿದೆ.

ಈ ಔಷಧಿಗಳ ಪ್ಯಾಕೆಟ್, ಲೇಬಲ್, ಪ್ಯಾಕೇಜ್ ಇನ್ಸರ್ಟ್ ಹಾಗೂ ಪ್ರಚಾರ ಸಾಮಗ್ರಿಗಳ ಮೇಲೆ “4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಫಿಕ್ಸ್ಡ್ ಡೋಸ್ ಕಾಂಬಿನೇಷನ್ ಬಳಸಬಾರದು” ಎಂಬ ಸ್ಪಷ್ಟ ಎಚ್ಚರಿಕೆ ಕಡ್ಡಾಯವಾಗಿ ನಮೂದಿಸುವಂತೆ ಸರ್ಕಾರ ನಿರ್ದೇಶಿಸಿದೆ.

4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಇಂತಹ ಔಷಧಿಗಳ ಸಂಯೋಜನೆ ಬಳಕೆಯಿಂದ ಆರೋಗ್ಯದ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಕ್ಕಳಿಗೆ ಹೆಚ್ಚು ಸುರಕ್ಷಿತ ಪರ್ಯಾಯ ಔಷಧಿಗಳು ಲಭ್ಯವಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ವರ್ಷ ಜೂನ್‌ನಲ್ಲಿ ಮಾನವ ಬಳಕೆಗೆ ಸಂಬಂಧಿಸಿದ 16 ಫಿಕ್ಸ್ಡ್ ಡೋಸ್ ಕಾಂಬಿನೇಷನ್ (FDC) ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ದೇಶಾದ್ಯಂತ ಕೇಂದ್ರ ಸರ್ಕಾರ ನಿಷೇಧಿಸಿತ್ತು. ತಜ್ಞರ ಸಮಿತಿ ಹಾಗೂ ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (DTAB) ನೀಡಿದ ಶಿಫಾರಸುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

Share with Friends
author avatar
Digital Desk