LatestTop Storiesವಿದೇಶ-International

ಬ್ಯಾಂಕಾಕ್ ಬಾರ್ ಅಗ್ನಿ ದುರಂತ, 27 ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

ಬ್ಯಾಂಕಾಕ್,ಜು13: ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನ ಪ್ರಸಿದ್ಧ ಬಾರ್ ಮತ್ತು ರೆಸ್ಟೋರೆಂಟ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 27 ಜನರು ಸಜೀವ ದಹನವಾಗಿದ್ದು, 60ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತರ ಪೈಕಿ 9 ಪುರುಷರು ಮತ್ತು 18 ಮಹಿಳೆಯರು ಸೇರಿದ್ದು, ಬ್ಯಾಂಕಾಕ್‌ನ ಚತುಚಾಕ್ ಜಿಲ್ಲೆಯಲ್ಲಿರುವ ಜನಪ್ರಿಯ ಮನರಂಜನಾ ತಾಣವಾದ ರೋಂಗ್ ಬೀರ್ ನಾ ಲಾತ್ ಪ್ರಾವೋ ಬಾರ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ರೋಂಗ್ ಬೀರ್ ನಾ ಲಾತ್ ಪ್ರಾವೋ ಬಾರ್‌ನಲ್ಲಿ ಭೀಕರ ಅಗ್ನಿ ದುರಂತ

ಬಾರ್‌ನ ಕಟ್-ಔಟ್ ಸ್ವಿಚ್ ಬೋರ್ಡ್‌ನಲ್ಲಿ ಹಠಾತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಿಡಿ ಹೊತ್ತಿಕೊಂಡಿದೆ ಎಂದು ಅಲ್ಲಿ ಪ್ರದರ್ಶನ ನೀಡುತ್ತಿದ್ದ ಸಂಗೀತಗಾರರೊಬ್ಬರು ತಿಳಿಸಿದ್ದಾರೆ.ಕೇವಲ ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದ್ದು, ಬಾರ್‌ನ ಒಳಗಿದ್ದ ನೂರಾರು ಗ್ರಾಹಕರು ದಿಕ್ಕಾಪಾಲಾಗಿ ಓಡಲಾರಂಭಿಸಿದರು.
ಬೆಂಕಿ ಹರಡುತ್ತಿದ್ದಂತೆ ದಟ್ಟವಾದ ಹೊಗೆ ಆವರಿಸಿಕೊಂಡಿದ್ದರಿಂದ ರಕ್ಷಣೆಗೆ ದಾರಿ ಕಾಣದೆ ಹಲವರು ಕಟ್ಟಡದ ಹಿಂಭಾಗಕ್ಕೆ ಓಡಿ ಶೌಚಾಲಯದಲ್ಲಿ ಅಡಗಿಕೊಂಡಿದ್ದರು.ಆದರೆ, ಹೊಗೆ ಮತ್ತು ವಿಷಕಾರಿ ಅನಿಲದ ತೀವ್ರತೆಗೆ ಸಿಲುಕಿ ಶೌಚಾಲಯದ ಒಳಗಡೆಯೇ ಅತಿ ಹೆಚ್ಚು ಮೃತದೇಹಗಳು ಪತ್ತೆಯಾಗಿವೆ ಎಂದು ಥೈಲ್ಯಾಂಡ್ ಪ್ರಧಾನಿ ಅನುಟಿನ್ ಚಾರ್ನ್ವಿರಾಕುಲ್ ತಿಳಿಸಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಇನ್ನು ಹಲವರು ನಾಪತ್ತೆಯಾಗಿದ್ದಾರೆ .

ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 27 ಜನರು ಸಜೀವ ದಹನ

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬ್ಯಾಂಕಾಕ್ ಗವರ್ನರ್ ಚಾಚಾರ್ತ್ ಸಿತ್ತಿಪಂಟ್ ಮಾತನಾಡಿ,ಬಾರ್‌ನ ಒಳಾಂಗಣ ವಿನ್ಯಾಸಕ್ಕೆ ಬಳಸಲಾಗಿದ್ದ ದಹನಕಾರಿ ವಸ್ತುಗಳಿಂದಾಗಿ ಬೆಂಕಿ ಕ್ಷಣಮಾತ್ರದಲ್ಲಿ ಹರಡಿದೆ. ಅಲ್ಲದೆ, ಬಾರ್‌ನ ತುರ್ತು ನಿರ್ಗಮನ ದಾರಿಗಳ ಬಳಿ ವ್ಯಾಪಾರಕ್ಕಾಗಿ ಮೇಜುಗಳನ್ನು ಹಾಕಿ ರಸ್ತೆಯನ್ನು ನಿರ್ಬಂಧಿಸಲಾಗಿತ್ತು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಮಾರು ಅರ್ಧ ಗಂಟೆಯ ಸತತ ಕಾರ್ಯಾಚರಣೆಯ ನಂತರ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಘಟನೆಯ ಕುರಿತು ವಿಧಿವಿಜ್ಞಾನ ಅಧಿಕಾರಿಗಳು ಅಧಿಕೃತ ತನಿಖೆ ಕೈಗೆತ್ತಿಕೊಂಡಿದ್ದಾರೆ.

Share with Friends
author avatar
Digital Desk