
‘ಗ್ಯಾರಂಟಿ’ ಗೊಂದಲ : ಗೃಹಲಕ್ಷ್ಮಿ-ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಕಡ್ಡಾಯ..?
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ಅನರ್ಹ ಫಲಾನುಭವಿಗಳನ್ನು ಹೊರಗಿಡಲು ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಎರಡೂ ಯೋಜನೆಗಳ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸುವಂತೆ ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಮರು ಪರಿಶೀಲನೆಗೆ ಒಳಗಾದ ಅರ್ಹರಿಗೆ ಮಾತ್ರ ಮುಂದಿನ ದಿನಗಳಲ್ಲಿ ಯೋಜನೆಯ ಸೌಲಭ್ಯ ಮುಂದುವರಿಯುವ ಸಾಧ್ಯತೆ ಇದೆ.
ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 1.28 ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದು, ಇವರಲ್ಲಿ ಲಕ್ಷಾಂತರ ಮಂದಿ ಅನರ್ಹರಾಗಿರುವ ಶಂಕೆ ವ್ಯಕ್ತವಾಗಿದೆ. ತೆರಿಗೆ ಪಾವತಿದಾರರು, ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಹಣ ಪಡೆಯುತ್ತಿರುವವರು ಹಾಗೂ ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆಯುತ್ತಿರುವವರನ್ನು ಗುರುತಿಸಲು ಸರ್ಕಾರ ಮುಂದಾಗಿದೆ. ಮೃತರ ಖಾತೆಗಳಿಗೆ 100 ಕೋಟಿ ರೂ.ಗಿಂತ ಹೆಚ್ಚು ಹಣ ವರ್ಗಾವಣೆಯಾಗಿರುವ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿರುವುದರಿಂದ ಯೋಜನೆಯ ಸಮಗ್ರ ಮರುಪರಿಶೀಲನೆ ಅನಿವಾರ್ಯವಾಗಿದೆ ಎನ್ನಲಾಗಿದೆ.
ಇದೇ ವೇಳೆ 1.68 ಕೋಟಿಗೂ ಹೆಚ್ಚು ಗೃಹಜ್ಯೋತಿ ಫಲಾನುಭವಿಗಳ ಮಾಹಿತಿಯನ್ನೂ ಸರ್ಕಾರ ಮರು ಪರಿಶೀಲನೆ ನಡೆಸುತ್ತಿದೆ. ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು ವಿದ್ಯುತ್ ಮೀಟರ್‌ಗಳಿರುವುದು ಹಾಗೂ ವಾಣಿಜ್ಯ ಉದ್ದೇಶಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಬಳಸಲಾಗುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಹೊಸ ಅರ್ಜಿ ನಮೂನೆ ಸಿದ್ಧಪಡಿಸಲಾಗುತ್ತಿದ್ದು, ಫಲಾನುಭವಿಗಳ ಆಧಾರ್, ಬ್ಯಾಂಕ್ ಖಾತೆ, ಪಡಿತರ ಚೀಟಿ, ಆದಾಯ ತೆರಿಗೆ ಹಾಗೂ ಜಿಎಸ್‌ಟಿ ವಿವರಗಳನ್ನು ಸಂಗ್ರಹಿಸಿ ಮರು ಪರಿಶೀಲನೆ ನಡೆಸುವ ಯೋಜನೆ ರೂಪಿಸಲಾಗಿದೆ.
ಬಯೋಮೆಟ್ರಿಕ್ ದೃಢೀಕರಣದ ಮೂಲಕ ನೈಜ ಫಲಾನುಭವಿಗಳನ್ನು ಗುರುತಿಸಿ ಅರ್ಹರಿಗೆ ಮಾತ್ರ ಯೋಜನೆಗಳ ಲಾಭ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಶೀಘ್ರದಲ್ಲೇ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವ ಕುರಿತು ಸರ್ಕಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆ ಇದೆ.
