
ಸಲ್ಮಾನ್ ಖಾನ್ ಹೊಸ ಲುಕ್ ವೈರಲ್
ಮುಂಬೈ: ಭಾರತೀಯ ಚಿತ್ರರಂಗದ ಮೈಲಿಗಲ್ಲು ಚಿತ್ರಗಳಲ್ಲಿ ಒಂದಾದ ಆಮಿರ್ ಖಾನ್ ನಟನೆಯ ‘ಲಗಾನ್’ ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಅದ್ಧೂರಿ ಸಂಭ್ರಮಾಚರಣೆ ನಡೆಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಆಮಿರ್ ಖಾನ್, ಕರೀನಾ ಕಪೂರ್ ಖಾನ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ವೇದಿಕೆ ಮೇಲೆ ಸಲ್ಮಾನ್ ಮತ್ತು ಆಮಿರ್ ಒಟ್ಟಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಖುಷಿ ತಂದರೆ, ಸಲ್ಮಾನ್ ಅವರ ಹೊಸ ಅವತಾರ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಸಂಪೂರ್ಣ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡರು. ಟ್ರಿಮ್ ಮಾಡಿದ ಗಡ್ಡ ಹಾಗೂ ಶಾರ್ಟ್ ಬಝ್-ಕಟ್ ಹೇರ್‌ಸ್ಟೈಲ್‌ನೊಂದಿಗೆ ಅವರು ಫಿಟ್ ಹಾಗೂ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದು, ಅವರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹೊಸ ಮೇಕ್‌ಓವರ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಸಲ್ಮಾನ್ ಅವರ ಹೊಸ ಲುಕ್ ನೋಡಿದ ಅಭಿಮಾನಿಗಳು ‘ತೇರೆ ನಾಮ್’ ಚಿತ್ರದ ಜನಪ್ರಿಯ ‘ರಾಧೆ’ ಪಾತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. “ರಾಧೆ ಕಮ್‌ಬ್ಯಾಕ್ 2027”, “ರಿಯಲ್ ಲೈಫ್‌ನಲ್ಲಿ ತೇರೆ ನಾಮ್ 2 ಬರುತ್ತಿದೆಯೇ?” ಎಂಬಂತಹ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನೂ ಕೆಲವರು ಅವರನ್ನು ‘ಗ್ಯಾಂಗ್‌ಸ್ಟರ್ ಸಲ್ಲು’ ಹಾಗೂ ‘ಬಾಪ್ ಆಫ್ ಬಾಲಿವುಡ್’ ಎಂದು ಹೊಗಳಿದ್ದಾರೆ.
ಸಲ್ಮಾನ್ ಖಾನ್ ಅವರ ಈ ಹೊಸ ಅವತಾರಕ್ಕೆ ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಅವರು ತಮ್ಮ ಮುಂಬರುವ ಸಿನಿಮಾಕ್ಕಾಗಿ ಈ ಲುಕ್ ಅಳವಡಿಸಿಕೊಂಡಿದ್ದಾರೆ ಎನ್ನುವ ಊಹಾಪೋಹಗಳು ಜೋರಾಗಿವೆ. ಕಳೆದ ತಿಂಗಳು ನಿರ್ದೇಶಕ ವಂಶಿ ಪೈಡಿಪಲ್ಲಿ ಅವರೊಂದಿಗೆ ಹೊಸ ಚಿತ್ರವನ್ನು ಸಲ್ಮಾನ್ ಘೋಷಿಸಿದ್ದು, ಸದ್ಯ ‘SVC63’ ಎಂದು ಕರೆಯಲಾಗುತ್ತಿರುವ ಈ ಬಿಗ್ ಬಜೆಟ್ ಸಿನಿಮಾವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಿಸುತ್ತಿದೆ.
