BlogLatestಬೆಳಗಾವಿ-Belagavi

ಉಕ್ಕಿ ಹರಿದ ಘಟಪ್ರಭಾ, ಬೆಳಗಾವಿ ಜಿಲ್ಲೆಯಲ್ಲಿ ಜಲಕಂಟಕ

ಬೆಳಗಾವಿ: ರಾಜ್ಯದಲ್ಲಿ ಮಳೆಯ ಅಬ್ಬರ ತಗ್ಗಿದ್ದರೂ ನೆರೆಯ ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುವರಿದಿರುವ ಕಾರಣ ಕೃಷ್ಣಾ ಹಾಗೂ ಉಪನದಿಗಳ ಮಟ್ಟ ಏರುತ್ತಲೇ ಇದೆ. 80ಕ್ಕೂ ಹೆಚ್ಚು ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ.

ಘಟಪ್ರಭಾ ನದಿ ಉಬ್ಬರದ ಮಧ್ಯೆ ಹಿಡಕಲ್ ಡ್ಯಾಂ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿರುವುದರಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಿ. ವೈ. ಹುಣಶ್ಯಾಳ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.

ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳ ಪ್ರವಾಹದಿಂದ 44 ಸೇತುವೆಗಳು ಮುಳುಗಡೆಯಾಗಿ ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಬಾಗಲಕೋಟೆ ಜಿಲ್ಲೆ ಕುಳಗೇರಿ ಕ್ರಾಸ್‌ ಬಳಿ ಮಲಪ್ರಭಾ ನದಿ ನೀರಿಗೆ ಸೇತುವೆ ಮುಳುಗಡೆಯಾಗಿ ಹುಬ್ಬಳ್ಳಿ-ಸೊಲ್ಲಾಪುರ ಸಂಪರ್ಕ ಕಡಿತಗೊಂಡಿದೆ.

ಕೃಷ್ಣಾ ನದಿಗೆ 2.92 ಲಕ್ಷ ಕ್ಯುಸೆಕ್‌ ನೀರು ಬರುತ್ತಿರುವುದರಿಂದ ಅಪಾಯದ ಮಟ್ಟ ಮೀರಿದೆ. ಚಿಕ್ಕೋಡಿ, ಕಾಗವಾಡ, ರಾಯಬಾಗ, ಅಥಣಿ ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿವಿಧ ಗ್ರಾಮಗಳ ಎಲ್ಲ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗುತ್ತಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಎನ್‌ಡಿಆರ್‌ಎಫ್ ತಂಗಳನ್ನು ಸನ್ನದ್ಧವಾಗಿಟ್ಟುಕೊಳ್ಳಲಾಗಿದೆ.ಘಟಪ್ರಭಾ ಆರ್ಭಟ ಸೋಮವಾರ ಸ್ವಲ್ಪ ಕಡಿಮೆಯಾಗಿದ್ದರೂ ಹಿಡಕಲ್‌ ಜಲಾಶಯದಿಂದ 44 ಸಾವಿರ ಕ್ಯುಸೆಕ್‌ ನೀರು ಬಿಡುತ್ತಿರುವುದರಿಂದ ಗೋಕಾಕ, ಮೂಡಲಗಿ ತಾಲೂಕಿನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.

Share with Friends
author avatar
News Desk