LatestTop Storiesರಾಜಕೀಯ | Politics

ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ : ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟನೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರವಾಣಿ ಕರೆ ಮಾಡಿ ಮನವಿ ಮಾಡಿದ್ದರೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಸಂಪೂರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ಸದ್ಯಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಧ್ಯಾಹ್ನ ಸುಮಾರು 3 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ಮಾಡಿ, “ಹೈಕಮಾಂಡ್‌ನಿಂದ ಒತ್ತಡವಿದೆ, ನೀವು ತಕ್ಷಣ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ” ಎಂದು ಹೇಳಿದ್ದಾಗಿ ಹೊರಟ್ಟಿ ತಿಳಿಸಿದರು. ಈ ಮಾತು ಕೇಳಿದ ತಕ್ಷಣ ತಮಗೆ ತೀವ್ರ ಆಘಾತವಾಗಿದ್ದು, ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಹೇಳಿದರು.

ಸಭಾಪತಿ ಹುದ್ದೆ ಒಂದು ಸಾಂವಿಧಾನಿಕ ಸ್ಥಾನವಾಗಿದ್ದು, ಅದರ ಬಗ್ಗೆ ಯಾವುದೇ ರಾಜಕೀಯ ಪಕ್ಷ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ನಡೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುವಂತದ್ದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸದ್ಯಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೊರಟ್ಟಿ, ಬಿಜೆಪಿ–ಜೆಡಿಎಸ್ ಮೈತ್ರಿ ನಾಯಕರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ತಾವು ದೀರ್ಘಕಾಲದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದು, ತಮ್ಮದೇ ಆದ ಅನುಭವ ಮತ್ತು ಗೌರವವಿದೆ ಎಂದರು.

ಸರ್ಕಾರ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಆಗ ಮುಂದಿನ ಬೆಳವಣಿಗೆಗಳನ್ನು ನೋಡೋಣ ಎಂದು ಹೇಳಿದ ಅವರು, ಅಗತ್ಯವಿದ್ದರೆ ಗೌರವಯುತವಾಗಿ ಹುದ್ದೆಯಿಂದ ನಿರ್ಗಮಿಸುವುದಾಗಿ ತಿಳಿಸಿದರು. ಪೀಠದಲ್ಲಿ ಕುಳಿತು ಕಾರ್ಯನಿರ್ವಹಿಸುವ ವೇಳೆ ಸಹಕರಿಸಿದ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಮತ್ತು ಕೃತಜ್ಞತೆ ಸಲ್ಲಿಸುವ ಇಚ್ಛೆಯನ್ನೂ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಉತ್ತಮ ಸ್ನೇಹಿತರಾಗಿದ್ದು, ಈ ವಿಚಾರವಾಗಿ ಅವರೊಂದಿಗೆ ಮಾತನಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೇನೆ ಎಂದ ಹೊರಟ್ಟಿ, ಆಗಸ್ಟ್‌ 13ರವರೆಗೆ ಸಮಯ ಇರುವುದರಿಂದ ಮುಂದಿನ ಬೆಳವಣಿಗೆಗಳನ್ನು ಕಾದು ನೋಡೋಣ ಎಂದು ಹೇಳಿದರು. ಇದುವರೆಗೆ ಯಾವುದೇ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಉದಾಹರಣೆ ಇಲ್ಲ ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

Share with Friends
author avatar
News Desk