LatestTop Storiesತುಮಕೂರು-Tumakuru

ತುರುವೇಕೆರೆ ವಸತಿ ಶಾಲೆಯಲ್ಲಿ ಫುಡ್ ಪಾಯಿಸನ್ – ಉಪಾಹಾರ ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ

ತುಮಕೂರು, ತುರುವೇಕೆರೆ: ತುರುವೇಕೆರೆ ತಾಲೂಕಿನ ಮಣೇಚಂದೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಉಪಾಹಾರ ಸೇವಿಸಿದ ಬಳಿಕ 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ವಸತಿ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಉಪಾಹಾರ ಸೇವಿಸಿದ ಸ್ವಲ್ಪ ಸಮಯದಲ್ಲೇ ವಾಂತಿ, ತಲೆಸುತ್ತು ಮತ್ತು ಸುಸ್ತಿನಿಂದ ಅಸ್ವಸ್ಥರಾದರು. ತಕ್ಷಣ ಎಚ್ಚೆತ್ತ ಶಿಕ್ಷಕರು ಅಸ್ವಸ್ಥಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

ತುರುವೇಕೆರೆ ವಸತಿ ಶಾಲೆಯಲ್ಲಿ ಫುಡ್ ಪಾಯಿಸನ್ ಉಪಾಹಾರ ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ

ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಕ್ಕಳನ್ನು ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ನಂತರ ಮಧ್ಯಾಹ್ನದ ವೇಳೆಗೆ 9 ವಿದ್ಯಾರ್ಥಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆದರು.

ಉಳಿದ 3 ವಿದ್ಯಾರ್ಥಿಗಳಿಗೆ ಸುಸ್ತುಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಸೂಚನೆ ಮೇರೆಗೆ ಆದಿಚುಂಚನಗಿರಿ ಐಟಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ರವಾನಿಸಲಾಯಿತು.

ಘಟನೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಕ್ಕಳು ಸೇವಿಸಿದ ತಿಂಡಿ ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವಸತಿ ಶಾಲೆಯಲ್ಲೇ ರಾತ್ರಿ 9 ಗಂಟೆಯವರೆಗೂ ಸ್ಟಾಫ್ ನರ್ಸ್‌ಗಳು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದರು.

ಘಟನಾ ಸ್ಥಳ ಮತ್ತು ಆಸ್ಪತ್ರೆಗೆತಹಶೀಲ್ದಾರ್ S.A. ಕುಂಜಾ ಅಹಮದ್ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮತ್ತು ಸಮಾಜ ಕಲ್ಯಾಣಾಧಿಕಾರಿ ರಮೇಶ್ ನಾಯಕ್ ಭೇಟಿ ನೀಡಿ ಮಕ್ಕಳ ಆರೋಗ್ಯ ಸ್ಥಿತಿ ಪರಿಶೀಲಿಸಿದರು.ಪ್ರಸ್ತುತ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ನವೀನ್ ಕುಮಾರ್ಮಾಹಿತಿ ನೀಡಿದರು.

ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳ ಪೋಷಕರು ನಿಟ್ಟುಸಿರು ಬಿಟ್ಟಿದ್ದು, ಶಾಲೆಯ ಆಹಾರದ ಗುಣಮಟ್ಟದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.

Share with Friends
author avatar
Digital Desk