LatestTop Storiesಜಿಲ್ಲಾ ಸುದ್ದಿಗಳು | District News

1.5 ಕೋಟಿ ಕೊಟ್ಟ ವ್ಯಾಪಾರಿಗೆ ಸಿಕ್ಕಿದ್ದು ಬರೀ ಬೂದಿ, ಮಣ್ಣು

ಹುಬ್ಬಳ್ಳಿ: ಬೂದಿ ಹಾಗೂ ಮಣ್ಣಿನ ಮಿಶ್ರಣದಲ್ಲಿ ಅಪಾರ ಪ್ರಮಾಣದ ಚಿನ್ನವಿದೆ ಎಂದು ನಂಬಿಸಿ ಹುಬ್ಬಳ್ಳಿಯ ಉದ್ಯಮಿಯೊಬ್ಬರಿಗೆ 1.5 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿರುವ ‘ಓಂ ಡೈಮಂಡ್‌ ಆ್ಯಂಡ್‌ ಜುವೆಲರ್ಸ್‌’ ಅಂಗಡಿ ಮಾಲೀಕ ಮಂಟುಕುಮಾರ್ ವಂಚನೆಗೊಳಗಾದವರು.

ಹರಿಯಾಣ ಮೂಲದ ಮುಖೇಶ್ ಎಂಬಾತ ಸುಮಾರು ಒಂದು ವರ್ಷದ ಹಿಂದೆ ಮಂಟುಕುಮಾರ್‌ಗೆ ಪರಿಚಯವಾಗಿದ್ದ. ಆಗಾಗ ಅಂಗಡಿಗೆ ಬಂದು ಚಿನ್ನ ಖರೀದಿ ಹಾಗೂ ಮಾರಾಟ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

15 ಕೋಟಿ ಕೊಟ್ಟ ವ್ಯಾಪಾರಿಗೆ ಸಿಕ್ಕಿದ್ದು ಬರೀ ಬೂದಿ ಮಣ್ಣು

ಆಗಸ್ಟ್ 13ರಂದು ಮುಖೇಶ್ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಂಗಡಿಗೆ ಬಂದಿದ್ದು, ಮೊಮ್ಮಕ್ಕಳ ಮದುವೆ ನಿಶ್ಚಯವಾಗಿದೆ ಎಂದು ಹೇಳಿ ಮಂಟುಕುಮಾರ್‌ಗೆ ಸಿಹಿ ನೀಡಿದ್ದ.

ಬಳಿಕ ಬೂದಿ ಮಿಶ್ರಿತ ಮಣ್ಣನ್ನು ನೀಡಿ, ಅದರಲ್ಲಿ ಚಿನ್ನವಿದ್ದು ಸೋಸಿದರೆ ಚಿನ್ನ ಸಿಗುತ್ತದೆ ಎಂದು ನಂಬಿಸಿದ್ದನು ಎಂದು ಗೊತ್ತಾಗಿದೆ.

ಆರಂಭದಲ್ಲಿ ಸಂಶಯ ಬಾರದಂತೆ ಅಲ್ಪಸ್ವಲ್ಪ ಅಸಲಿ ಚಿನ್ನದ ಮಾದರಿಯನ್ನು ತೋರಿಸಿ ನಂಬಿಕೆ ಗಿಟ್ಟಿಸಿಕೊಂಡಿದ್ದ ಬಳಿಕ ಹಂತ ಹಂತವಾಗಿ ಸುಮಾರು 1.5 ಕೋಟಿ ರೂಪಾಯಿ ಹಣ ಪಡೆದು ಚೂರಿ ಹಾಕಿದ್ದಾನೆ.
ಹಣ ನೀಡಿದ ಬಳಿಕ ತಂದಿಟ್ಟ ಬೂದಿ ಮಣ್ಣನ್ನು ಪರಿಶೀಲಿಸಿದಾಗ ಅದರಲ್ಲಿ ಯಾವುದೇ ಚಿನ್ನವಿಲ್ಲದಿರುವುದು ತಿಳಿದುಬಂದಿದೆ.

ತಾನು ಸಂಪೂರ್ಣವಾಗಿ ಮೋಸ ಹೋಗಿರುವುದನ್ನು ಅರಿತ ವ್ಯಾಪಾರಿ ಹುಬ್ಬಳ್ಳಿ ಶಹರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹರಿಯಾಣ ಮೂಲದ ಆರೋಪಿಗಾಗಿ ಜಾಲ ಬೀಸಿದ್ದಾರೆ.

ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಅಥವಾ ನಿಧಿ-ಬೂದಿಯಲ್ಲಿ ಚಿನ್ನವಿದೆ ಎಂದು ನಂಬಿಸಿ ಜನರನ್ನು ವಂಚಿಸುವ ಜಾಲಗಳು ಸಕ್ರಿಯವಾಗಿದ್ದು, ಸಾರ್ವಜನಿಕರು ಅಪರಿಚಿತರ ಆಮಿಷಗಳಿಗೆ ಒಳಗಾಗಬಾರದೆಂದು ಪೊಲೀಸರು ಮನವಿ ಮಾಡಿದ್ದಾರೆ.

Share with Friends
author avatar
Digital Desk