Latestವಿದೇಶ-International

ದುಬೈನಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯಕಾರ್ಮಿಕರು ಸೇರಿದಂತೆ 7 ಮಂದಿ ದುರ್ಮರಣ

ದುಬೈ, ಜೂನ್ 9: ದುಬೈನ ಎಮಿರೇಟ್ಸ್ ರಸ್ತೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಅವರಲ್ಲಿ ಹಲವರು ಭಾರತೀಯರು ಎಂದು ದುಬೈನಲ್ಲಿರುವ ಭಾರತೀಯ ದೂತಾವಾಸ ದೃಢಪಡಿಸಿದೆ. ಈ ದುರ್ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.

ಮಾಹಿತಿಯ ಪ್ರಕಾರ, ತಾಂತ್ರಿಕ ದೋಷದಿಂದ ರಸ್ತೆಯ ಮಧ್ಯಭಾಗದಲ್ಲಿ ನಿಂತಿದ್ದ ಟ್ರಕ್‌ಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಮಿನಿ ಬಸ್ ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮಿನಿ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದುಬೈ ಪೊಲೀಸರು ನೀಡಿರುವ ಮಾಹಿತಿಯಂತೆ, ಬಸ್ ಚಾಲಕನ ಅಜಾಗರೂಕತೆ ಹಾಗೂ ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವುದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಗಾಯಗೊಂಡ ಒಂಬತ್ತು ಮಂದಿಯಲ್ಲಿ ಐವರು ಗಂಭೀರ ಗಾಯಗೊಂಡಿದ್ದು, ಉಳಿದ ನಾಲ್ವರಿಗೆ ಮಧ್ಯಮ ಪ್ರಮಾಣದ ಗಾಯಗಳಾಗಿವೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ಭಾರತೀಯ ದೂತಾವಾಸದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಗಾಯಗೊಂಡಿರುವ ಭಾರತೀಯರಿಗೆ ಅಗತ್ಯ ವೈದ್ಯಕೀಯ ಹಾಗೂ ಕಾನೂನು ನೆರವು ದೊರಕುವಂತೆ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘X’ನಲ್ಲಿ ಸಂತಾಪ ಸೂಚಿಸಿರುವ ಭಾರತೀಯ ದೂತಾವಾಸ, “ದುಬೈನಲ್ಲಿ ನಮ್ಮ ಕಾರ್ಮಿಕರು ಪ್ರಾಣ ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪಗಳು ಹಾಗೂ ಪ್ರಾರ್ಥನೆಗಳಿವೆ” ಎಂದು ತಿಳಿಸಿದೆ.

ಮೃತರ ನಿಖರ ಸಂಖ್ಯೆ, ಗುರುತು ಹಾಗೂ ರಾಷ್ಟ್ರೀಯತೆಯನ್ನು ದೃಢೀಕರಿಸುವ ಪ್ರಕ್ರಿಯೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share with Friends
author avatar
News Desk