
ಕಣಿಯನಹುಂಡಿ ತೋಟದ ಮನೆಯಲ್ಲಿ ಎಸ್.ಜಾನಕಿ ಅಂತ್ಯಕ್ರಿಯೆ
ಮೈಸೂರು, ಜು.12- ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ಜಾನಕಮ್ಮ ಅವರ ಅಂತ್ಯಸಂಸ್ಕಾರ ಮೈಸೂರಿನ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಸದ್ಯ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ತೆಲುಗು ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ನಡೆಯಲಿದ್ದು, ಅವರ ಪುತ್ರ ಮುರುಳಿಕೃಷ್ಣ ಪುತ್ರಿ ಅಪ್ಸರಾ ಅಂತಿಮ ವಿಧಿ-ವಿಧಾನ ನೆರವೇರಿಸಲಿದ್ದಾರೆ.

ಇನ್ನು ಅಂತ್ಯಸಂಸ್ಕಾರ ನಡೆಯುವ ಕಣಿಯನಹುಂಡಿ ಗ್ರಾಮದ ತೋಟದ ಮನೆಯಲ್ಲಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ 2 ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಅಂತಿಮ ವಿಧಿವಿಧಾನಗಳ ವೇಳೆ ವಿವಿಐಪಿಗಳು ಹಾಗೂ ಗಣ್ಯರಷ್ಟೇ ಅಲ್ಲದೆ,ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೂ ವೀಕ್ಷಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಕಣಿಯನಹುಂಡಿ ಗ್ರಾಮಕ್ಕೆ ಹೋಗುವ ರಸ್ತೆ ಸಾಕಷ್ಟು ಕಿರಿದಾಗಿರುವುದರಿಂದ, ವಾಹನ ಸವಾರರಿಗೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ಪೊಲೀಸರು ವಿಶೇಷ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ.
ಇದಲ್ಲದೆ, ಜಾನಕಿ ಅವರ ಅಂತಿಮ ವಿಧಿವಿಧಾನಗಳ ಸಂದರ್ಭದಲ್ಲಿ ಚಲನಚಿತ್ರರಂಗದ ಖ್ಯಾತ ನಟ-ನಟಿಯರು, ನಿರ್ದೇಶಕರು, ಸರ್ಕಾರದ ಪರವಾಗಿ ಸಚಿವರು, ಉನ್ನತ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ.ಅಂತಿಮ ಕ್ಷಣದಲ್ಲಿ ಭಾಗವಹಿಸಲು ಕನಿಷ್ಠ 2 ರಿಂದ 3 ಸಾವಿರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಬರುವ ಸಾಧ್ಯತೆಯಿದ್ದು, ಅದಕ್ಕೆ ತಕ್ಕಂತೆ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಂಡಿದೆ.
