
ಭವಾನಿ ಶಂಕರ್ ದೇವಸ್ಥಾನದ ಪುಷ್ಕರಣಿ ಮೇಲೆ ರಸ್ತೆ ನಿರ್ಮಾಣ..
ಹುಬ್ಬಳ್ಳಿ : ‘ಪುರಾತನ ಭವಾನಿಶಂಕರ ದೇವಸ್ಥಾನಕ್ಕೆ ಹೊಂದಿಕೊಂಡು ಪುಷ್ಕರಣಿ ಇದ್ದ ಜಾಗದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆ ನಿರ್ಮಿಸಿರುವುದನ್ನು ತೆರವು ಮಾಡಿ, ಯಥಾಸ್ಥಿತಿ ಕಾಯ್ದುಕೊಳ್ಳಲು ಆಗಸ್ಟ್ 22ರವರೆಗೂ ಗಡುವು ನೀಡಲಾಗಿತ್ತು.
ಅಷ್ಟರೊಳಗೆ ಕ್ರಮ ವಹಿಸದಿದ್ದರೆ, ಬೃಹತ್ ಪ್ರತಿಭಟನೆ ಮೂಲಕ ರಸ್ತೆ ತೆರವು ಮಾಡಲಾಗುವುದು’ ಎಂದು ಪುರಾತನ ಶ್ರೀ ಭವಾನಿಶಂಕರ ನಾರಾಯಣ ದೇವಸ್ಥಾನ ಪುಷ್ಕರಣಿ ಸಂರಕ್ಷಣಾ ಸಮಿತಿ ಸಂಚಾಲಕ ಸುಧಾಕರ ಶೆಟ್ಟಿ ಎಚ್ಚರಿಕೆ ನೀಡಿದ್ದರು.ಆದರೆ, ಇನ್ನೂವರೆಗೆ ರಸ್ತೆ ತೆರವು ಮಾಡದ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರು.
ಈ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿಯಲ್ಲಿ ಮುಂಜಾಗ್ರತಾ ಕ್ರಮವಾಗಿ 163 ಸೆಕ್ಷನ್ ಜಾರಿ ಮಾಡಲಾಗಿದೆ. ಅಲ್ಲದೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪೊಲೀಸರಿಂದ ರೂಟ್ ಮಾರ್ಚ್ ಮಾಡಲಾಯಿತು.
ಕ್ರಿ.ಶ. 976ರಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಬಳಿ ಪುಷ್ಕರಣಿ ಇತ್ತು ಎನ್ನುವುದು 1823–24ರಲ್ಲಿ ಪ್ರಕಟವಾದ ಬಾಂಬೆ ಗೆಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪಾಲಿಕೆಯ ದಾಖಲೆಗಳಲ್ಲೂ 30 ಗುಂಟೆ ಸಾರ್ವಜನಿಕ ಜಾಗದಲ್ಲಿ ಹೊಂಡ ಇದೆ ಎಂಬುದನ್ನು ಗುರುತಿಸಲಾಗಿದೆ. ಇಂತಹ ಜಾಗದಲ್ಲಿ ₹25 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಿಸಿ ಜನರ ಹಣ ಪೋಲು ಮಾಡಲಾಗಿದೆ.
‘ಪುರಾತನ ದೇಗುಲ ಸಂರಕ್ಷಣೆಯು ರಾಜ್ಯ ಪುರಾತತ್ವ ಇಲಾಖೆಯ ಕೆಲಸ. ಭವಾನಿಶಂಕರ ದೇವಸ್ಥಾನವು ಪುರಾತನ ದೇಗುಲ ಎಂಬುದನ್ನು ಇಲಾಖೆ ಗುರುತಿಸಿದೆ.
ನಿಯಮಾನುಸಾರ ಸುತ್ತಮುತ್ತ 100 ಮೀಟರ್‌ನಲ್ಲಿ ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕಿತ್ತು. ಮಹಾನಗರ ಪಾಲಿಕೆಯು ಆ ಕೆಲಸ ಮಾಡಿಲ್ಲ.ಹೀಗಾಗಿ, ರಸ್ತೆ ತೆರವು ಮಾಡಿ ಪುಷ್ಕರಣಿ ರಕ್ಷಿಸುವಂತೆ ಹಿಂದುಪರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು.
